ಭಾನುವಾರ, ನವೆಂಬರ್ 1, 2020

ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ


ಕನ್ನಡವೆಂದರೆ ಬರಿ ನುಡಿಯಲ್ಲ,
ಹಿರಿದಿದೆ ಅದರರ್ಥ ;
ಜಲವೆಂದರೆ ಕೇವಲ ನೀರಲ್ಲ.
ಅದು ಪಾವನ ತೀರ್ಥ.

ಕನ್ನಡವೆಂದರೆ ಬರಿ ನಾಡಲ್ಲ ;
ಭೂಪಟ, ಗೆರೆ, ಚುಕ್ಕೆ ;
ಮರವೆಂದರೆ ಬರಿ ಕಟ್ಟಿಗೆಯೆ?
ಶ್ರೀಗಂಧದ ಚಕ್ಕೆ.

ಕನ್ನಡ ಬರಿ ಕರ್ನಾಟಕವಲ್ಲ
ಅಸೀಮ, ಅದು ಅದಿಗಂತ ;
ದೇವರು ಕೇವಲ ವಿಗ್ರಹವಲ್ಲ,
ಅಂತರ್ಭಾವ ಅನಂತ.

ಕನ್ನಡವೆಂದರೆ ಜನಜಂಗುಳಿಯಲ್ಲ
ಜೀವನ ಶೈಲಿ, ವಿಧಾನ ;
ವಾಯುವೆಂದರೆ ಬರಿ ಹವೆಯೇ ಅಲ್ಲ :
ಉಸಿರದು, ಪಂಚಪ್ರಾಣ.

ಕನ್ನಡವಲ್ಲ ತಿಂಗಳು ನಡೆಸುವ
ಗುಲ್ಲಿನ ಕಾಮನಬಿಲ್ಲು ;
ರವಿ ಶಶಿ ತಾರೆಯ ನಿತ್ಯೋತ್ಸವವದು,
ಸರಸತಿ ವೀಣೆಯ ಸೊಲ್ಲು.. 

-ಕೆ.ಎಸ್ ನಿಸಾರ್ ಅಹಮದ್ 
ಕವಿ - ಕೆ. ಎಸ್ ನಿಸಾರ್ ಅಹಮದ್

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ 01. ಮರಗಿಡಗಳು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ...