ಭಾನುವಾರ, ಜೂನ್ 13, 2021

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ


ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ
01. ಮರಗಿಡಗಳು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ಮೈದಾನವಾಗಿಸುವುದು ಬೇಡ. ಮನೆಯ ಅಂಗಳದಲ್ಲಿ ರುವ ಮರವನ್ನು ಉಳಿಸಿಕೊಂಡು ಹೂದೋಟ ಅಥವಾ ಕೈತೋಟ ನಿರ್ಮಿಸಿದಲ್ಲಿ ಸಹಜತೆ ಇನ್ನಷ್ಟು ಹೆಚ್ಚುತ್ತದೆ.

02. ಮನೆಯಿಂದ ಹೊರಗೆ ಕಾಲಿಟ್ಟ ತತ್‌ಕ್ಷಣ ವಾಹನಗಳನ್ನು ಅವಲಂಬಿಸುವ ಬದಲು ಕಾಲ್ನಡಿಗೆ ಅಥವಾ ಸೈಕಲ್‌ ತುಳಿಯುವುದು ನಮ್ಮ ಆರೋಗ್ಯ ಮಾತ್ರವಲ್ಲದೆ ಪರಿಸರದ ಹಿತದೃಷ್ಟಿಯಿಂದಲೂ ಒಳ್ಳೆಯದು.

03. ಮಕ್ಕಳನ್ನು ಶಾಲೆಗೆ ಬಿಡಲು ಅಥವಾ ವಾಪಸ್‌ ಕರೆತರಲು ಪ್ರತಿನಿತ್ಯ ಸ್ವಂತ ವಾಹನವನ್ನು ಬಳಸುವ ಬದಲು ಸಾಧ್ಯವಾದಷ್ಟು ನಡಿಗೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಥವಾ ವಿದ್ಯುತ್‌ ಚಾಲಿತ ಪರಿಸರಸ್ನೇಹಿ ವಾಹನಗಳ ಮೊರೆ ಹೋಗೋಣ.

04. ನಮ್ಮ ಮನೆಗಳಲ್ಲಿ ಸಾಧ್ಯವಾದಷ್ಟು ಸೌರ ಅಥವಾ ಪವನ ಶಕ್ತಿ ಆಧಾರಿತ ವಿದ್ಯುತ್‌ಬಳಸಲು ಆದ್ಯತೆ ನೀಡೋಣ. ಅಸಾಧ್ಯವಾದಲ್ಲಿ ಸುತ್ತಮುತ್ತಲಿನ ನಿವಾಸಿಗಳು ಅಥವಾ ಆ ಪ್ರದೇಶದ ಸ್ಥಳೀಯರ ಜತೆಗೂಡಿ ಇಂಥ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ರಕ್ಷಣೆಗೆ ಪ್ರಯತ್ನಿಸೋಣ.

05. ಸಾಧ್ಯವಾದಷ್ಟು ಮರುಬಳಕೆಯ ವಸ್ತುಗಳ ಖರೀದಿ ನಮ್ಮದಾಗಲಿ. ಗಾಜಿನ ಬಾಟಲ್‌ಗ‌ಳು, ಮರು ಬಳಕೆಯ ಬ್ಯಾಗ್‌, ಕಪ್‌ಗ್ಳ ಬಳಕೆ ನಮ್ಮ ಹವ್ಯಾಸವಾಗಲಿ. ಪ್ಲಾಸ್ಟಿಕ್‌ ವಸ್ತುಗಳಿಗೆ ಶಾಶ್ವತ ವಿದಾಯ ಹೇಳ್ಳೋಣ.

06. ಮನೆಯಲ್ಲಿನ ಜೈವಿಕ ತ್ಯಾಜ್ಯಗಳನ್ನು ಗೊಬ್ಬರವಾಗಿ ಸಂಸ್ಕರಿಸಿ ನಮ್ಮ ಹೂದೋಟ ಅಥವಾ ಕೈತೋಟಗಳಿಗೆ ಬಳಕೆ ಮಾಡೋಣ.

07. ಸಾವಯವ ತರಕಾರಿ, ಬೇಳೆಕಾಳು, ಧಾನ್ಯಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡೋಣ. ಇದರಿಂದ ನಮ್ಮ ಆರೋಗ್ಯದ ರಕ್ಷಣೆ ಸಾಧ್ಯ ಮಾತ್ರವಲ್ಲದೆ ಸ್ಥಳೀಯ ಕೃಷಿಕರಿಗೆ ನಾವು ಒಂದಿಷ್ಟು ಸಹಾಯ ಮಾಡಿದಂತಾಗುತ್ತದೆ. ಅಲ್ಲದೆ ಕನಿಷ್ಠ ಸ್ಥಳೀಯ ಮಟ್ಟದಲ್ಲಾದರೂ ಸ್ವಾವಲಂಬಿ ಬದುಕು ನಮ್ಮದಾಗಲಿ.

08. ಜೀವ ಸಂಕುಲಕ್ಕೆ ಜೀವದ ಸೆಲೆಯಾಗಿರುವ ನೀರಿನ ಸದ್ಬಳಕೆ, ಸಂರಕ್ಷಣೆ, ಮರುಪೂರಣಕ್ಕೆ ಹೆಚ್ಚಿನ ಆದ್ಯತೆ ನೀಡೋಣ.

09. ನಮ್ಮ ಸುತ್ತಮುತ್ತಲಿನ ಪ್ರಾಚೀನ ಮತ್ತು ಸಾಂಪ್ರದಾಯಿಕ ನೀರಿನ ಮೂಲಗಳ ರಕ್ಷಣೆ ನಮ್ಮ ಕರ್ತವ್ಯವಾಗಲಿ, ಇದು ಇಂದಿನ ತುರ್ತೂ ಸಹ.

10. ಪರಿಸರ ವಿಷಯವನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಮೂಲಕ ಮುಂದಿನ ತಲೆಮಾರಿನಲ್ಲಿ ಎಳವೆಯಿಂದಲೇ ಪರಿಸರದ ಬಗೆಗೆ ಕಾಳಜಿ ಮೂಡಿಸುವಂತೆ ಸರಕಾರ, ಶಾಲೆಗಳು ಹಾಗೂ ಆಡಳಿತ ವ್ಯವಸ್ಥೆಯನ್ನು ಆಗ್ರಹಿಸೋಣ.

11. ಕಡಿಮೆ ಬಳಕೆ, ಮರು ಬಳಕೆ, ಪುನರುತ್ಪಾದನೆ..ಇವು ಮೂರು ನಮ್ಮ ಧ್ಯೇಯವಾಗಿರಲಿ.

12. ಪರಿಸರ ಸಂರಕ್ಷಣೆ ಕೇವಲ ಬಾಯಿಮಾತಿಗೆ ಸೀಮಿತವಾಗಿದ್ದರೆ ಶೋಭೆ ತಾರದು. ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿರಲಿ.

13. ಪ್ರತಿ ಪ್ರಾಣಿಗೂ ಮನುಷ್ಯನ ಹಾಗೆಯೇ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ ಎಂಬುದನ್ನು ಮರೆಯದಿರೋಣ. ಪ್ರಾಣಿಗಳ ವಾಸಸ್ಥಾನಗಳನ್ನು ನಾವು ಅತಿಕ್ರಮಿಸದಿದ್ದಲ್ಲಿ ಅವು ನಮ್ಮ ತಂಟೆಗೆ ಎಂದೂ ಬರಲಾರವು.

14. ಈ ಪರಿಸರ ನಮ್ಮ ಜನಾಂಗಕಷ್ಟೇ ಸೀಮಿತವಲ್ಲ, ಮುಂದಿನ ಜನಾಂಗಕ್ಕೂ ಇದನ್ನು ಉಳಿಸುವ ಮಹತ್ತರ
ಗುರಿ ಹಾಗೂ ಹೊಣೆಗಾರಿಕೆ ನಮ್ಮದೇ.

15.ನಮ್ಮ ಪೂರ್ವಿಕರು ಉಳಿಸಿಕೊಂಡು ಬಂದಂತಹ ಕೆರೆ ಕುಂಟೆ ಅರಣ್ಯ ಹಾಗು ತೋಪುಗಳನ್ನು ಸಂರಕ್ಷಣೆ ಹಾಗೂ ಭೂ ಕಬಳಿಕೆ ತದೆಗಟುವುದು ನಮ್ಮೆಲ್ಲರ ಕರ್ತವ್ಯ

ಸೋಮವಾರ, ಮಾರ್ಚ್ 8, 2021

ಸಾಂಪ್ರದಾಯಿಕ ರೀತಿಯಲ್ಲಿ ಶುದ್ಧ ಅಡುಗೆ ಎಣ್ಣೆ

ಸಾಂಪ್ರದಾಯಿಕ ರೀತಿಯಲ್ಲಿ ಶುದ್ಧ ಅಡುಗೆ ಎಣ್ಣೆ


ಮಾಗಡಿ ತಾಲೂಕು ಸೋಲೂರು ಹೋಬಳಿ ಬಾಣವಾಡಿ ಗ್ರಾಮದ ಕೆರೆ ಕೋಡಿ ಬಸವಣ್ಣ ದೇವಸ್ಥಾನದ ಹಿಂಭಾಗದಲ್ಲಿ ಗಾಣದಲ್ಲಿ ಧಾನ್ಯಗಳನ್ನು ಅರೆಯುತ್ತಾ, ಸಾಂಪ್ರದಾಯಿಕ ರೀತಿಯಲ್ಲಿ ಶುದ್ಧ ಅಡುಗೆ ಎಣ್ಣೆ ಉತ್ಪಾದಿಸುವ ಪ್ರಕ್ರಿಯೆಯೊಂದು ಅಲ್ಲಿ ಆರಂಭವಾಗಿದೆ.

 ಶೇಂಗಾ (ಕಡಲೆಕಾಯಿ), ಕೊಬ್ಬರಿ, ಅಗಸೆ ಹುಚ್ಚೆಳ್ಳು ಎಳ್ಳು ಕುಸುಬೆಯಂತಹ ಎಣ್ಣೆಗಳ ಪರಿಮಳ ಗಾಣವಿರುವ ಜಾಗ ಬಾಣವಾಡಿ ಕೋಡಿ( ಕೋಡಿ ಬಸವೇಶ್ವರ ದೇವಸ್ಥಾನದ ಹಿಂಭಾಗ) ತೆಂಗಿನ ಗರಿಯ ಸೂರಿನ ಕೆಳಗೆ ಜೋಡೆತ್ತುಗಳನ್ನು ಕಟ್ಟಿ ಗಾಣ ತಿರುಗಿಸುತ್ತಿರುವ ಹಾಗೂ ಗಾಣದ ಒರಳಿನಲ್ಲಿ, ಹಿಂಡಿ ತೆಗೆಯುತ್ತಾ, ಎಣ್ಣೆ ಸಂಗ್ರಹಿಸುತ್ತಿರುವ ದೃಶ್ಯ ಕಾಣುತ್ತದೆ.

ಆಹಾರ ಕಲಬೆರಕೆ ಮತ್ತು ಅದರಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಕಂಡು ಬೇಸತ್ತಿದ್ದ ಜನರಿಗೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನಿಸಿತು. ಇನ್ನೊಂದೆಡೆ ದೇಸಿ ತಳಿಗಳು, ಸಾಂಪ್ರದಾಯಿಕ ಕೃಷಿ ವಿಧಾನಗಳು ಅಳಿವಿನಂಚಿಗೆ ಸರಿಯುತ್ತಿದ್ದದು ಮತ್ತಷ್ಟು ಕಾಡಿತು. ಇವೆರಡನ್ನೂ ಗಂಭೀರವಾಗಿ ಪರಿಗಣಿಸಿದ ಅವರು, ಆಹಾರ ಜಾಗೃತಿ ಮೂಡಿಸುತ್ತಾ, ದೇಸಿ ಆಹಾರ ಉತ್ಪಾದನೆಗೆ ಮುಂದಾದರು. ಅದರ ಮೊದಲ ಪ್ರಯತ್ನವಾಗಿ ಗಾಣದಿಂದ ಎಣ್ಣೆ ತೆಗೆಯುವ ಘಟಕ ಆರಂಭಿಸಿದರು.

ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಆಹಾರ ಧಾನ್ಯ ಬೆಳೆಸಲು ರೈತರನ್ನು ಉತ್ತೇಜಿಸುವುದು. ಅವರು ಬೆಳೆದ ಆಹಾರ ಧಾನ್ಯವನ್ನು ಖರೀದಿಸುವುದು. ಆ ಧಾನ್ಯಗಳನ್ನು ಬಳಸಿ ಗಾಣದಿಂದಲೇ ಅಡುಗೆ ಎಣ್ಣೆ ಉತ್ಪಾದಿಸಿ, ಗ್ರಾಹಕರಿಗೆ ತಲುಪಿಸುವುದು. ಈ ಮೂಲಕ ದೇಸಿ ತಳಿ ರಾಸುಗಳ ಪೋಷಣೆಗೆ ಉತ್ತೇಜನ, ಪರಿಶುದ್ಧ ಆಹಾರ ಜಾಗೃತಿ ಜತೆಗೆ ಗ್ರಾಮೀಣ ಯುವಕರಿಗೆ, ಅವರ ಗ್ರಾಮಗಳಲ್ಲೇ ಉದ್ಯೋಗ ಸಿಗುವುದಂತೆ ಮಾಡುವುದು- ಇಂಥ ಉದ್ದೇಶಗಳೊಂದಿಗೆ ಮುನ್ನಡೆದಿರುವ ಮಲ್ಲಿಕಾರ್ಜುನಯ್ಯ ರವರು ಸಾಂಪ್ರದಾಯಿಕ ರೀತಿಯಲ್ಲಿ ಶುದ್ಧ ಅಡುಗೆ ಎಣ್ಣೆ ಗಾಣವನ್ನು ಆರಂಭಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 
ಮಲ್ಲಿಕಾರ್ಜುನಯ್ಯ
+919449187046
ಕಿರಣ್
+918971109807

ಗೂಗಲ್ ಮ್ಯಾಪ್ ಸಹಾಯ ಇಲ್ಲಿ ಕ್ಲಿಕ್ ಮಾಡಿ

ಭಾನುವಾರ, ಜನವರಿ 17, 2021

ಗೋಕ್ಷೀರ, ಕುರಿಹಾಲು ಮತ್ತು ಮೃತಪೀಠಗಳು

ಗೋಕ್ಷೀರ, ಕುರಿಹಾಲು ಮತ್ತು ಮೃತಪೀಠಗಳು

ಡಾ. ಲಿಂಗದಹಳ್ಳಿ ಹಾಲಪ್ಪ,ಬಳ್ಳಾರಿ Updated: 
ಕೃಪೆ ಪ್ರಜಾವಾಣಿ
ಇತ್ತೀಚೆಗೆ ಮಠಾಧೀಶರೊಬ್ಬರು `ಕುರಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಬೇಕು' ಎಂಬ ಒತ್ತಾಯಿಸಿದ್ದನ್ನು ಹಲವು ದೃಶ್ಯ ಮಾಧ್ಯಮಗಳು ವ್ಯಂಗ್ಯವಾಗಿ ಬಿತ್ತರಿಸಿವೆ. ಪ್ರಸ್ತುತ ವಿಚಾರ ಕುರಿತಂತೆ ಒಂದು ಪ್ರತಿಕ್ರಿಯೆ. ಗೋಕ್ಷೀರವೇ ಶ್ರೇಷ್ಠ ಮತ್ತು ಕುರಿಹಾಲು ಕನಿಷ್ಠ ಎಂಬ ಅಭಿಪ್ರಾಯವನ್ನು ಜನಮಾನಸದಲ್ಲಿ ತೂರಿಸಿದ ಪುರೋಹಿತಶಾಹಿಗಳ ಹುನ್ನಾರಕ್ಕೆ ಶತಶತಮಾನಗಳ ಇತಿಹಾಸವಿದೆ. ಆದರೆ ಗೋವಿನಷ್ಟೇ ಕುರಿಯೂ ಪವಿತ್ರವೆಂದು ನಂಬಿ ಅವೆರಡೂ ನಮ್ಮ ಬದುಕಿನ ಎರಡು ಕಣ್ಣು(ಗೋವು ಕಾಮಧೇನು ಮತ್ತು ಕುರಿ ಪವಿತ್ರ ಲಕ್ಷ್ಮಿ)ಗಳೆಂದು ಭಾವಿಸಿ, ಪಾಲಿಸಿ, ಪೋಷಿಸುತ್ತ ಬಂದ ಪಶುಪಾಲಕರಿಗೆ ಐವತ್ಮೂರು ಸಾವಿರ ವರ್ಷಗಳ ದೀರ್ಘ ಚರಿತ್ರೆಯಿದೆ ಎಂಬುದನ್ನು ಇಂತಹವರು ಅರಿಯುವ ಅವಶ್ಯಕತೆಯಿದೆ. ಇಂದಿಗೂ ಪಶುಪಾಲಕರು (ಹಾಲುಮತ) ಕುರಿಹಿಂಡನ್ನು `ನನ್ನ ಬದುಕು' ಎಂದೇ ಸಂಬೋಧಿಸುತ್ತಾರೆ.


ಬೌದ್ಧ ಮತಾನುಯಾಯಿ, ಕ್ರಿಸ್ತ ಪೂರ್ವದಲ್ಲಿ ಭಾರತ ಸೇರಿದಂತೆ ಇಂದಿನ ಪಾಕಿಸ್ತಾನ, ಆಫ್ಘಾನಿಸ್ತಾನಗಳನ್ನು ಆಳಿದ ಕುರುಬ ಸಮುದಾಯ ((Romavanshi-baghela shephard king)ದ ಸಾಮ್ರೋಟ ಕನಿಷ್ಕನು ತನ್ನ ನಾಣ್ಯದಲ್ಲಿ ಕುರಿ (ಮೇಕೆ)ಯ ಚಿತ್ರವನ್ನು ಕೊರೆಸಿ ಚಲಾವಣೆಗೆ ಬಿಟ್ಟಿದ್ದುದು ಶಾಸನಗಳಿಂದ ತಿಳಿದುಬರುತ್ತದೆ. ‘kaniska’s coin have 4 armed shiva, standing facing the head holding in upper right hand vajra (thunderbolt) and goat (sheep) on its bind legs in right field’ (catalogue of  coins by V.A. Smith, 1906, vol.1, P.70).ಇದೇ ರೀತಿ ಹುವಿಷ್ಕ ((Huvishaka)ಎಂಬ ದೊರೆಯು ಸಹ ಕುರಿ/ಮೇಕೆಗಳಿಗೆ ರಾಷ್ಟ್ರೀಯ ಮನ್ನಣೆಯನ್ನು ಕೊಟ್ಟಿದ್ದುದು ತಿಳಿದುಬರುತ್ತದೆ. ‘Huvishaka’ s coins have shiva four armed with one face turned wearing indian waiste coat, holding in upper right hand vajra, in lower right hand goat (sheep), in left upper hand trident and lower left hand resting on the horns/ heads of the goat/ sheep. ಇದಲ್ಲದೇ `ಭಾರತದ ರಾಜಪುರಾಣದ ವಲ್ಲಭಪುರ, ಕೋಟಾಬರೂದಿ, ಚಿತ್ತೂರು, ಉದಯಪುರ, ಬಿಕಾನೇರ್, ಮೇವಾಡಗಳನ್ನು ಕುರುಬ ರಾಜರು ಆಳಿದ್ದು, ಕರೋಲಿ ಸಂಸ್ಥಾನದ ದೊರೆಗಳು ತಮ್ಮ ರಾಜಮುದ್ರೆ (ಲಾಂಛನ)ಯಲ್ಲಿ  ಎದುರುಬದುರಾಗಿ ನಿಂತ ಕುರಿ ಮತ್ತು ಹುಲಿಗಳು, ಮಧ್ಯದಲ್ಲಿ ಹಸು (ನಂದಿ) ಮತ್ತು ಮೇಲ್ಗಡೆ ಮೇಕೆಯ ತಲೆಯನ್ನು ಹೊಂದಿದ ಚಿತ್ರವಿದೆ ((Tod’s Rajasthan,  Pandit Lalit Mohan Audhiya, vol.1, 1894.) ಎಂದು ಇತಿಹಾಸಕಾರರು ದಾಖಲಿಸಿರುವುದನ್ನು ಗಮನಿಸಿದರೆ ಕುರಿ (ಮೇಕೆ)ಗಳಿಗೆ ರಾಜಮನ್ನಣೆ ಪ್ರಾಚೀನ ಕಾಲದಿಂದಲೂ ಇತ್ತು ಎಂಬುದು ಅರ್ಥವಾಗುತ್ತದೆ. ಆದರೆ ಇಂದೇಕೆ ಈ ಅವಗಣನೆ, ಹೀಯಾಳಿಕೆ?

ಕುರಿಯನ್ನು ಮಬ್ಬು, ದಡ್ಡಪ್ರಾಣಿ ಎನ್ನುವುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ಮುಗ್ದ, ಮೃದು ಸ್ವಭಾವದ ಇದು ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಜೀವಿಯೂ ಹೌದು. ಮಾಂಸಕ್ಕಾಗಿ ಸಾಕುವ ಮತ್ತು ಹಾಲುಕೊಡುವ ಇತರ ಪ್ರಾಣಿಗಳಾದ ಹಸು, ಎಮ್ಮೆ, ಹಂದಿ ಇತ್ಯಾದಿಗಳು ತಮ್ಮ ಇತರ ಆಹಾರಗಳ ಜೊತೆಗೆ ಮನುಷ್ಯನ ಮಲವನ್ನೂ ತಿಂದು ಬದುಕಿದರೆ, ಕುರಿಯು ಆ ವಾಸನೆ ಇರುವ ಜಾಗದಲ್ಲಿ ನಿಲ್ಲುವುದೇ ಇಲ್ಲ. ತನ್ನ ಒಡೆಯ ಒಂದು ಸಲ ಸೂಚಿಸಿದ ಸಂಜ್ಞೆಗಳನ್ನು ಅದು ಬದುಕಿರುವವರೆಗೂ ಪಾಲಿಸುತ್ತದೆ. ತನ್ನ ದೇಹದ ಮಾಂಸ, ಹಾಲು, ಉಣ್ಣೆ, ಹಿಕ್ಕೆಯನ್ನು ಮಾನವನಿಗೆ ದಾನ ಮಾಡುವ ಕುರಿಯ ಪವಿತ್ರತೆ ಈ ಜೀವ ಜಗತ್ತಿನಲ್ಲಿ ಇನ್ನೊಂದು ಪ್ರಾಣಿಗಿಲ್ಲ. ಸಸ್ಯಶಾಸ್ತ್ರ ಸೂಚಿಸುವಂತೆ ಅತ್ಯಂತ ವಿಷಕಾರಿಯಾದ ಎಕ್ಕೆ, ಹುಸಲಂಗಿ ಗಿಡಗಳನ್ನು ತಿಂದು, ಅರಗಿಸಿ ಅಮೃತದಂತಹ ಹಾಲು ನೀಡುವ ನಿಷ್ಪಾಪಿ ಬದುಕನ್ನು ಅರಿಯದ ಮಾನವನೇ ಮೂರ್ಖನಲ್ಲವೆ? ದೇಶದ ಬಹುಸಂಖ್ಯಾತರಿಗೆ ಇದರ ಮಾಂಸದ ಅವಶ್ಯಕತೆಯಿರುವ ಕಾರಣಕ್ಕಾಗಿ ಅದರ ಮೌಲ್ಯವನ್ನು ಕುಂಠಿತಗೊಳಿಸುವುದು ಯಾವ ನ್ಯಾಯ?

ಇನ್ನು ಕುರಿ ಉದ್ಯಮ ದೇಶದ ಆರ್ಥಿಕತೆಯ ಮೇಲೆ  ಬಹು ಮುಖ್ಯ ಪರಿಣಾಮ ಬೀರಿದೆ. ಕಾಬೂಲ್, ನೇಪಾಳ, ಟಿಬೆಟ್‌ಗಳು ಸೇರಿದಂತೆ ಕಾಶ್ಮೀರದಿಂದ ಭಾರತದಾದ್ಯಂತ ಕನ್ಯಾಕುಮಾರಿಯವರೆಗೆ ಕುರಿ ಸಾಕಾಣಿಕೆಯಲ್ಲಿ ದೇಶದ ಶ್ರಮ-ಜೀವನಾಡಿಯಾದ ದಲಿತ ಹಿಂದುಳಿದ ಸಮುದಾಯಗಳು ತೊಡಗಿಸಿಕೊಂಡಿವೆ.

ಕುರಿ ಸಾಕಾಣಿಕೆ, ಕಂಬಳಿನೇಕಾರಿಕೆ, ಮಾಂಸ, ಚರ್ಮಗಳ ಆಮದು-ರಪ್ತು ವ್ಯಾಪಾರ ಇತ್ಯಾದಿ., ಇಂದು ರಾಷ್ಟ್ರದ ಮೊದಲ ಸಾಲಿನ ಉದ್ಯಮವಾಗಿದ್ದು, ನೂರಾರು ಕೋಟಿ ರೂಪಾಯಿಗಳ ವಹಿವಾಟು ಹೊಂದಿದೆ. ಕುರಿಯ ಮೂತ್ರಕ್ಕೆ ಔಷಧಿಯ ಗುಣಗಳಿವೆ ಹಾಗೂ ಕುರಿ ಹಿಂಡಿನಲ್ಲಿ ಮಲಗಿದರೆ ಕ್ಷಯರೋಗವಾಸಿಯಾಗುತ್ತದೆಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಕುರಿ ಎಂಬ ಸಾಧು ಪ್ರಾಣಿ ದೇಶಕ್ಕೆ ಆದಾಯ ತಂದರೆ, ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯ ಸಾಕಾಣಿಕಾ ಕಾರಣಗಳಿಂದ ಹಲವು ಕೋಟಿ ರೂಪಾಯಿಗಳ ನಷ್ಟವಿದೆ. ಇದರರ್ಥ ಇದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಎಂದಲ್ಲ (ಈ ಕುರಿತು ತೀರ್ಮಾನಿಸುವುದು ಭಾರತದ ಒಕ್ಕೂಟ ಸರ್ಕಾರ), ಆದರೆ ಹಾಗೆ ಅಭಿಪ್ರಾಯಪಡುವುದು ಕೀಳರಿಮೆಯಾಗುವುದಿಲ್ಲ.

ಕೊನೆಯ ಮಾತು : `ಮೇಷ  ಎಂಬ ಪದವು ವೈದಿಕ ಸಾಹಿತ್ಯ, ಖಗೋಳಶಾಸ್ತ್ರ, ಪುರಾಣಗಳಲ್ಲಿ ಪ್ರಾಮುಖ್ಯತೆ ಪಡೆದಿದ್ದು, ಹನ್ನೆರಡು ರಾಶಿಗಳಲ್ಲಿ ಮೇಷ ಮೊದಲನೆಯದಾಗಿದೆ. `ಓ ದೇವರೆ! ಕುರಿ ಮತ್ತು ದನಗಳಲ್ಲಿ ನಾವು ಸಮೃದ್ಧಿ ಹೊಂದೋಣ. ನಾವು ಯಾರನ್ನೂ ಕೊಲ್ಲುವುದಿಲ್ಲ ಹಾಗೂ ಕಾಡುಗಳಲ್ಲಿ ವಿರಾಮ ಜೀವನ ನಡೆಸುತ್ತಾ, ಮಂತ್ರಗಳನ್ನು ಜಪಿಸುತ್ತಾ ಪಶುಗಳನ್ನು ಮೇಯಿಸುತ್ತೇವೆ (ಯಜುರ್ವೇದ, 19- 80) ಎಂದು ವೇದಗಳು ಘೋಷಿಸುತ್ತ, ಋಷಿ-ಮುನಿಗಳು ಕುರಿ, ಹಸುಗಳನ್ನು ಸಾಕಿ, ತಾವೇ ನೇಯ್ದ ಉಣ್ಣೆ ಬಟ್ಟೆ ಧರಿಸುತ್ತಿದ್ದುದನ್ನು ದಾಖಲಿಸಿವೆ.

ವಿಷಯ ಅದಲ್ಲ, ಇಂತಹ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳದೇ ತಾವೇ ಭಾರತೀಯ ಸಂಸ್ಕೃತಿಯ ರಕ್ಷಕ-ವಕ್ತಾರರಂತೆ ಬಿಂಬಿಸಿಕೊಳ್ಳುವ ಇಂದಿನ ಮೇಲ್ವರ್ಗದ ಮಠಾಧೀಶರು ಸತ್ತ ಪೀಠ (ಹುಲಿ, ಜಿಂಕೆಗಳು ಸತ್ತ (ಸಾಯಿಸಿ) ನಂತರ ಚರ್ಮ ತೆಗೆದು) ಏರಿ ಕುಳಿತು ಮೃತ ಪೀಠಾಧಿಪತಿಗಳಾಗಿದ್ದಾರೆ? ಇವರು ಕುರಿ, ಮೇಕೆ, ಹಸುಗಳನ್ನು ಪ್ರೀತಿಸಿ ಸಾಕಿ ಅವುಗಳ ಉಣ್ಣೆಯಿಂದ ಮಾಡಿದ ಜೀವಂತ ಪೀಠದಲ್ಲಿ ಕುಳಿತು ವಾಸ್ತವವನ್ನು ಅರಿಯಲಿ
ಕೃಪೆ ಪ್ರಜಾವಾಣಿ
ಕುರಿ(ಮೇಕೆ)ಗಳಿಗೆ ರಾಜಮನ್ನಣೆ ಪ್ರಾಚೀನ ಕಾಲದಿಂದಲೂ ಇತ್ತು. ಇದು ಇತಿಹಾಸದಲ್ಲೂ ದಾಖಲಾಗಿದೆ.

ಮಂಗಳವಾರ, ಡಿಸೆಂಬರ್ 22, 2020

ರಾಷ್ಟ್ರೀಯ ರೈತರ ದಿನಾಚರಣೆ ಬಗ್ಗೆ ನಿಮಗೆಷ್ಟು ಗೊತ್ತು

ನಮ್ಮ ಶ್ರಮಜೀವಿ ರೈತರ ಪಾತ್ರದ ಗೌರವಾರ್ಥ ಭಾರತದ ಮಾಜಿ ಪ್ರಧಾನಿ ಅಪಾರ ರೈತಪರ ಕಳಕಳಿಯನ್ನು ಹೊಂದಿದ ಗೌರವಾನ್ವಿತ 

ಶ್ರೀ ಚೌದರಿ ಚರಣ್ ಸಿಂಗ್‍ರ ಜನ್ಮದಿನವಾದ ಡಿಸೆಂಬರ, 23 ನೇ ತಾರೀಖಿನಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ

ಶ್ರೀ ಚೌದರಿ ಚರಣ್ ಸಿಂಗ್‍ರವರು ರೈತ ಕುಟುಂಬದಿಂದ ಬಂದವರಾಗಿದ್ದು, ಅತ್ಯಂತ ಸರಳ ಜೀವಿಗಳು, ಸೂಕ್ಷ್ಮ ಸಂವೇದಿಗಳು. ರೈತರ ಮತ್ತು ಕೂಲಿ ಕಾರ್ಮಿಕರ ಮೇಲೆ ತೀವ್ರತರ ಕಳಕಳಿಯನ್ನು ಹೊಂದಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ, ಭಾರತದ ಪ್ರಧಾನಿ ಹಾಗೂ ಉಪ ಪ್ರಧಾನಿಯಾದಾಗ ಬಜೆಟ್‍ಗಳನ್ನು ಕೃಷಿಕರ ಪರವಾಗಿರುವಂತೆ ನೋಡಿಕೊಂಡರು. ರೈತರ ಪರವಾಗಿ ಹಲವಾರು ನೀತಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು.

ಇವರು ಜುಲೈ 28, 1979 ರಿಂದ ಜನೇವರಿ 14, 1980 ರವರೆಗೆ ಅಲ್ಪಾವಧಿಗೆ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. 1979 ನೇ ಸಾಲಿನ ಬಜೇಟ್‍ನ್ನು ಮಂಡಿಸಿದ ಇವರು ರೈತರ ಅಗತ್ಯತೆಗಳನ್ನು ಪೂರೈಸಲು ಬೇಕಾದ ಎಲ್ಲ ಅಂಶಗಳನ್ನು ಬಜೆಟ್‍ನಲ್ಲಿ ಸೇರಿಸಿದ್ದರು. ಇದರಲ್ಲಿ ರೈತ ಪರವಾದ ಹಲವಾರು ನೀತಿಗಳನ್ನು ಪ್ರಕಟಿಸಿದ್ದರು. ಇವರ ಪ್ರಯತ್ನಗಳಿಂದಾಗಿ ಎಲ್ಲ ಸಣ್ಣ ಮತ್ತು ಬಡ ರೈತರುಗಳನ್ನು ದೊಡ್ಡ ಭೂ ಮಾಲಿಕರು ಮತ್ತು ಹಣದಾಳದಾರರ ವಿರುದ್ಧ ಒಗ್ಗೂಡಿಸಲು ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದರು. ಇವರು ಲೋಕಸಭೆಯಲ್ಲಿ ಪರಿಚಯಿಸಿದ್ದ ಕೃಷಿ ಉತ್ಪಾದನೆ ಮಸೂದೆಯು ಅತ್ಯಂತ ಪ್ರಸಿದ್ಧ ಮಾರುಕಟ್ಟೆ ಮಸೂದೆಯಾಗಿತ್ತು. ಈ ಮಸೂದೆಯನ್ನು ಹಣವುಳ್ಳ ವಿತರಕರು ಮತ್ತು ಭೂ ಮಾಲಿಕರು ರೈತರನ್ನು ಶೋಷಣೆ ಮಾಡುವುದರಿಂದ ತಡೆಯುವ ಉದ್ದೇಶದಿಂದ ಹೊರತರಲಾಗಿತ್ತು. ಇವರು ಜಮೀನ್ದಾರಿ ನಿರ್ಮೂಲನಾ ನೀತಿ ಹೊರತರುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದರು. ಇದರಿಂದ ರೈತರ ಮೇಲಿನ ತಮ್ಮ ಕಳಕಳಿ ಅತ್ಯಂತ ಕಾಳಜಿಯುತವಾದದ್ದೆಂದು ತೋರಿಸಿಕೊಟ್ಟಿದ್ದರು.
ಇವರು ಉತ್ತಮ ವಾಗ್ಮಿಗಳಲ್ಲದೆ, ಒಳ್ಳೆಯ ಬರಹಗಾರರೂ ಆಗಿದ್ದರು. ಬರಹಗಾರರಾಗಿ ರೈತರ, ಬಡವರ ಸಮಸ್ಯೆಗಳ ಕುರಿತ ಆಲೋಚನೆಗಳನ್ನು ಚಿತ್ರಿಸುವ ಲೇಖನಗಳನ್ನು ಮತ್ತು ಪುಸ್ತಕಗಳನ್ನು ರಚಿಸಿದ್ದಲ್ಲದೆ, ಎಲ್ಲ ಸಮಸ್ಯೆಗಳಿಗೆ ಸಾಧ್ಯವಿರುವಂತಹ ವಿವಿಧ ಪರಿಹಾರಗಳನ್ನು ಸಹ ಕೊಡುತ್ತಿದ್ದರು.

ಇವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿಯವರ ಘೋಷಣೆಯಾದ “ಜೈ ಜವಾನ್ ಜೈ ಕಿಸಾನ್” ರೈತರ ಕ್ಷೇಮಕ್ಕಾಗಿ ಸದಾ ಶ್ರಮಿಸುತ್ತಿದ್ದರು. ಹಳ್ಳಿಯ ರೈತಾಪಿ ಕುಟುಂಬದಲ್ಲಿ ಜನಿಸಿದ್ದರಿಂದ ಅಲ್ಲಿನ ಜನರ ಪರಿಸ್ಥಿತಿ ಮತ್ತು ಸಮಸ್ಯೆಗಳ ಆಳವಾದ ಅರಿವನ್ನು ಹೊಂದಿದ್ದರಿಂದ ಹಳ್ಳಿಗರು, ಹಿಂದುಳಿದವರ ಮತ್ತು ರೈತರ ಅಭಿವೃದ್ಧಿಗಾಗಿ ಸದಾ ಕಾರ್ಯಪ್ರವೃತ್ತರಾಗಿರುತ್ತಿದ್ದರು. ಶೇ. 70 ಕ್ಕಿಂತ ಹೆಚ್ಚು ಜನ ಹಳ್ಳಿಯವರಿದ್ದು, ಅವರ ಕಸುಬು ವ್ಯವಸಾಯವಾಗಿರುತ್ತದೆ. ರೈತರು ನಮ್ಮ ದೇಶದ ಬೆನ್ನೆಲುಬು ಹಾಗೂ ಹಳ್ಳಿಗಳ ಅಭಿವೃದ್ಧಿಯಿಂದಲೇ ದೇಶದ ಏಳಿಗೆ ಸಾಧ್ಯವೆಂದು ದೃಢವಾಗಿ ನಂಬಿದ್ದರು. ಹೀಗಾಗಿ ಇವರನ್ನು ರೈತ ಸಮುದಾಯಕ್ಕೆ ಸೇರಿದ ಮಣ್ಣಿನ ಮಗನನ್ನಾಗಿ ಗುರುತಿಸಲ್ಪಡಲಾಗುತ್ತಿದೆ. ಮೇ 29, 1987 ನೇ ದಿವಸದಂದು ಕೊನೆಯುಸಿರೆಳೆದರು. ಇವರ ಸಮಾಧಿ ಸ್ಥಳವನ್ನು “ಕಿಸಾನ್ ಘಾಟ್” ಎಂದು ನಾಮಕರಣ ಮಾಡಿ ರೈತ ಪರ ಕಾಳಜಿ ಹೊಂದಿದ ಇವರಿಗೆ ಗೌರವ ಸಲ್ಲಿಸಲಾಗಿದೆ.

ಶ್ರಮಜೀವಿ ರೈತರ ಗೌರವಾರ್ಥ ಮತ್ತು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ರೈತರ ಪಾತ್ರದ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ 23 ರಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಈ ದಿನದಂದು ಸಾರ್ವಜನಿಕ ರಜೆ ಇರುತ್ತದೆ. ಈ ದಿನದಂದು ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿಯೂ ಕೃಷಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೇಂದ್ರಗಳಲ್ಲೆಡೆಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇಂದು ರೈತಪರ ಹೋರಾಟಗಳಲ್ಲಿ ಮುಂದಾಳತ್ವ ವಹಿಸಿದ ರೈತರ ಯಶೋಭಿವೃದ್ಧಿಗೆ ಶ್ರಮಿಸಿದ ನಾಯಕರಿಗೆ ಗೌರವ ಸಲ್ಲಿಸಲಾಗುತ್ತದೆ. ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಚರ್ಚಾಕೂಟ, ವಸ್ತುಪ್ರದರ್ಶನಗಳನ್ನು, ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾರೆ. ರೈತರ ಮತ್ತು ಕೃಷಿಯಲ್ಲಿ ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರಿಗೆ ನಡೆದು ಬಂದ ಹಾದಿ, ಮುಂದೆ ಸಾಗಬೇಕಾದ ದಾರಿಯ ರೂಪರೇಷೆಗಳು, ರೈತರ ಸಮಸ್ಯೆಗಳ ಪರಿಹಾರೋಪಾಯಗಳು ಮುಂತಾದ ವಿಚಾರಗಳ ಚರ್ಚೆಯನ್ನು ವಿಜ್ಞಾನಿಗಳು, ವಿಸ್ತರಣಾಧಿಕಾರಿಗಳು ಮತ್ತು ರೈತ ನಾಯಕರುಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ.
ಕೃಷಿ ಮತ್ತು ರೈತ ಎರಡೂ ಅತ್ಯಂತ ಪ್ರಮುಖವಾಗಿದ್ದರೂ ಅಭಿವೃದ್ಧಿ ಪಥದಲ್ಲಿ ಇವೆರಡೂ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗಿವೆ ಎಂದು ಹೇಳಬಹುದು. ಕೃಷಿಯ ಬೆಳೆವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ನೀತಿಗಳನ್ನು ರೂಪಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಇವು ಇತರೆ ಕ್ಷೇತ್ರಗಳಿಗೆ ಹೋಲಿಸಿದಲ್ಲಿ ತೀವ್ರ ಕಡಿಮೆ ಎನ್ನಬಹುದು ಅಥವಾ ನಮ್ಮ ವ್ಯವಸ್ಥೆಯಲ್ಲಿನ ದೋಷಗಳಿಂದ ಅವು ರೈತರಿಗೆ ತಲುಪದೆ ಅಭಿವೃದ್ಧಿ ಪಥದಲ್ಲಿ ಕೃಷಿ ಇನ್ನೂ ಎಗುತ್ತಲೇ ಸಾಗಿದೆ ಎನ್ನಬಹುದು. ಇದಕ್ಕೆ ಇನ್ನೂ ಹಲವಾರು ಕಾರಣಗಳನ್ನು ಹೆಸರಿಸಬಹುದು.
“ಹಸಿರು ಕ್ರಾಂತಿ” ಯಿಂದಾಗಿ ದೇಶದ ಆಹಾರೋತ್ಪಾದನೆ ಹೆಚ್ಚಾಗಿದ್ದಂತು ನಿಜ. ಆದರೆ, ಹಸಿರು ಕ್ರಾಂತಿಯ ಜೊತೆ ಜೊತೆಗೆ ಬಂದ ರಾಸಾಯನಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗಳಿಗೆ ಕಾರಣಗಳಾಗುತ್ತವೆ ಎಂಬುದನ್ನು ಸರಕಾರಗಳು ಮತ್ತು ಇಲಾಖೆಗಳು ಮುಂದಾಲೋಚಿಸಿರಲಿಲ್ಲ. ಹಸಿರು ಕ್ರಾಂತಿಯ ಪರಿಣಾಮದಿಂದ ಭೂಮಿಯ ಒಡಲು ವಿಷದಿಂದ ತುಂಬಿದೆ. ಭೂಮಿಯಲ್ಲಿ ಸಾವಯವದ ಅಂಶ ತೀವ್ರ ಕಡಿಮೆಯಾಗಿ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ. ವಾಸ್ತವವಾಗಿ ಭೂಮಿಯು ನಿರ್ಜೀವವಾಗುತ್ತಿದೆ. ಮಣ್ಣಿನ ತೇವಾಂಶವನ್ನು ಹಿಡಿದಿಡುವ ಶಕ್ತಿ ಕಡಿಮೆಯಾಗಿ ಬೆಳೆಗಳಿಗೆ ನೀರಿನ ಅಭಾವವುಂಟಾಗಿ ನಿರೀಕ್ಷಿತ ಇಳುವರಿಯನ್ನು ಪಡೆಯಲಾಗುತ್ತಿಲ್ಲ. ಎಷ್ಟೋ ಬಾರಿ ಖುರ್ಚು ಮಾಡಿದ ಬಂಡವಾಳವೂ ಸಹಿತ ಮರಳದಂತಾಗಿದೆ. ಇದರಿಂದಾಗಿ ನಮ್ಮ ರೈತರು ತೀವ್ರ ಸಂಕಷ್ಟಗಳಿಗೆ ಈಡಾಗುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಗಳು, ಕೈಗಾರಿಕೆಗಳು, ಶಹರಗಳು, ವಿಮಾನ ನಿಲ್ದಾಣಗಳು ಮುಂತಾದವುಗಳ ನಿರ್ಮಾಣಕ್ಕಾಗಿ ಕೃಷಿ ಭೂಮಿಯನ್ನು ಉಪಯೋಗಿಸಿಕೊಳ್ಳುವುದರಿಂದ ದಿನೇ ದಿನೇ ಕೃಷಿ ಭೂಮಿ ಕ್ಷೀಣಿಸುತ್ತಿದೆ. ಅಭಿವೃದ್ಧಿಯ ಈ ನಾಗಾಲೋಟದ ಕಾರಣ, ಕಾಡುಗಳು ಸಹ ನಾಶವಾಗುತ್ತಿದ್ದು, ಪರಿಸರದಲ್ಲಿ ಅತಿ ಹೆಚ್ಚಿನ ಅಸಮತೋಲನ ಕಂಡು ಬರುತ್ತಿದೆ. ಇದರಿಂದ ಬರ, ಅಕಾಲಿಕ ಮಳೆ ಕೆಲವೆÀಡೆ ಪ್ರವಾಹದಂತಹ ಪರಿಸ್ಥಿತಿಗಳು ಎದುರಾಗುತ್ತ್ತಿವೆ. ಇನ್ನು ತಾಪಮಾನವು ಸಹ ಹೆಚ್ಚುತ್ತಿದ್ದು, ತೇವಾಂಶದ ಕೊರತೆಯ ಜೊತೆಗೆ ಹೆಚ್ಚಿದ ಉಷ್ಣಾಂಶದಿಂದ ಕೆಲವೊಂದು ಬೆಳೆಗಳನ್ನು ಬೆಳೆಯಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಜಾಗತಿಕ ತಾಪಮಾನದ ಪರಿಣಾಮ ಎನ್ನಬಹುದು.
ಒಟ್ಟಾರೆ ಕೃಷಿ ಮತ್ತು ರೈತ ಎಲ್ಲ ಕಡೆಯಿಂದಲೂ ಪರೀಕ್ಷೆಗೆ ಒಳಪಡಲಾಗುತ್ತಿದ್ದು, ಒಂದು ಬೆಳೆಯನ್ನು ಬೆಳೆಯಲು ಹಲವಾರು ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಇದೆ. ಒಟ್ಟಾರೆ ಭಾರತದ ಕೃಷಿ ಸ್ಥಿತಿಯು ಗೊಂದಲಮಯ ಸ್ಥಿತಿಯಲ್ಲಿದೆ. ಇಲ್ಲಿಂದ ಮುಂದಕ್ಕೆ ಇಡಬೇಕಾದ ಹೆಜ್ಜೆಯನ್ನು ನಾವಿನ್ನು ಮುಂದಾಲೋಚನೆಯಿಂದ, ವಿವೇಕತನದಿಂದ ಮತ್ತು ಅತ್ಯಂತ ಜಾಗರೂಕತೆಯಿಂದ ಇಡಬೇಕಾಗಿದೆ.


ಇನ್ನೊಂದು ಕಡೆ ವಿಶ್ವ ವ್ಯಾಪಾರ ಸಂಸ್ಥೆಯ ಒಪ್ಪಂದಗಳ ಪ್ರಕಾರ ಮುಕ್ತ ವ್ಯಾಪಾರದ ದೃಷ್ಠಿಯಿಂದ ಆಮದು ಮತ್ತು ರಪ್ತುಗಳಿಗೆ ಅನುಕೂಲವಾದರೂ ಕೆಲವೊಮ್ಮೆ ಒತ್ತಾಯವಾಗಿ ಆಮದು ಮಾಡಿಕೊಳ್ಳುವಂತಹ ಪರಿಸ್ಥಿತಿಗಳಿಂದಾಗಿ ಕೃಷಿ ಉತ್ಪನ್ನಗಳ ಬೆಲೆಗಳು ಹಿಡಿತಕ್ಕೆ ಸಿಗದೆ ವಿಪರಿತ ಏರಿಳಿತಗಳಿಂದಾಗಿ ರೈತರಿಗೆ ಸರಿಯಾದ ಬೆಲೆ ಸಿಗದೇ ನಷ್ಟಗಳನ್ನು ಅನುಭವಿಸುತ್ತಿದ್ದಾರೆ.

ಸರ್ವಜ್ಞನ ಒಂದು ರೈತರ ಬಗ್ಗೆ ತ್ರಿಪದಿ

 ಬಸವಣ್ಣನವರ ವಚನ


ವಿಶ್ವನ ವಿಶ್ವಮಾನವ ಕುವೆಂಪುರವರು ರೈತ ಗೀತೆ


ಸೋಮವಾರ, ಡಿಸೆಂಬರ್ 14, 2020

ಜಪವ ಮಾಡಿದರೇನು ಕನಕದಾಸ

 ಜಪವ ಮಾಡಿದರೇನು ತಪವ ಮಾಡಿದರೇನುವಿಪರೀತ 
ಕಪಟಗುಣ ಕಲುಷವಿದ್ದವರು ಪ
ಆದಿಗುರುವರಿಯದೆ ಅತ್ತಲಿತ್ತಲು 
ತೊಳಲಿವೇದಶಾಸ್ತ್ರವನೋದಿ ಬಾಯಾರಲುಹಾದಿಯನು ಕಾಣದಂತಿರುತಿರ್ದು
 ಹಲವೆಂಟುವಾದ ತರ್ಕದೊಳಿದ್ದ ಭೇದವಾದಿಗಳು 1
ತುಂಬಿ ಬತ್ತಿದಂತೆಮಡದಿ ಮಕ್ಕಳಿಗೆಂದು 
ಒಡವೆ ವಸ್ತ್ರವ ಗಳಿಸೆಹಿಡಿಯಲಾ ಯಮನವರ ಕಟ್ಟಿಗೊಳಗಾಗಿ 2
ಚಳಿಮಳೆಯ ಅತಿ ಕಾರುಗತ್ತಲೆಯೊಳಗೆ ಎದ್ದುಹೊಳೆಯೊಳಗೆ ಮುಳುಗಿ ಜಪ ತಪವ ಮಾಡಿಕಳವಳಿಸಿ ನೂರೆಂಟು ಹಲುಬಿ ಬಳಲಲು ಬೇಡನಳಿನಾಕ್ಷ ಆದಿಕೇಶವನ ನೆನೆ ಮನವೆ 3

ಭಾನುವಾರ, ನವೆಂಬರ್ 22, 2020

ಹಂದಿ ಸಾಕಾಣಿಕೆ

 

ವೈಜ್ಞಾನಿಕ ಹಂದಿ ಸಾಕಾಣಿಕೆ ಲಾಭದಾಯಕ ಉದ್ದಿಮೆ


 ಮಾಂಸದ ಉತ್ಪಾದನೆ ಕೂಡ ಸೇರಿದೆ. ಈ ದಿಶೆಯಲ್ಲಿ ಹಂದಿ ಸಾಕಣೆಯಿಂದ ಅಧಿಕ ಲಾಭ ಪಡೆಯಬಹುದಾಗಿದೆ.
ಪ್ರಾಣಿ ಜನ್ಯ ಆಹಾರಗಳಲ್ಲಿ ಹಂದಿ ಮಾಂಸಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಆದು ಉತ್ತಮ ದರ್ಜೆಯ ಸಸಾರಜನಕ ಮತ್ತು ಅಪಾರ ಶಕ್ಥಿಯನ್ನು ಒದಗಿಸುವುದರೊಂದಿಗೆ ಅತ್ಯಂತ ರುಚಿಕರವಾದ ಮಾಂಸವೆಂದು ಹೆಸರುವಾಸಿಯಾಗಿದೆ. ಹಂದಿ ಮಾಂಸ ಶಾಖಾಹಾರಿಗಳಿಗೆ ಒಂದು ಉತ್ತಮ ಆಹಾರ ಪದಾರ್ಥ, ಕಡಿಮೆ ಬೆಲೆಯಲ್ಲಿ ದೊರೆಯುವುದು ಹಂದಿಯ ದೇಹದ ಹೆಚ್ಚಿನ ಭಾಗ ತಿನ್ನಲು ಅರ್ಹವಾಗಿದೆ. ಹಂದಿ ಮಾಂಸದಲ್ಲಿ ಹೆಚ್ಚು ಕೊಬ್ಬಿನ ಅಂಶವಿದ್ದು ನೀರಿನ ಅಂಶ ಕಡಿಮೆ, ತಿಂದವರಿಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಪ್ರಪಂಚದ ಒಟ್ಟಾರೆ ಮಾಂಸದ ಉತ್ಪಾದನೆಯಲ್ಲಿ ಹಂದಿ ಮಾಂಸ ಶೇಖಡ 45 ರಷ್ಟಿದ್ದು 



ನಮ್ಮ ದೇಶ ಹಾಗೂ ರಾಜ್ಯದಲ್ಲಿ ಹಂದಿ ಸಾಕಣೆ
ವಿದೇಶಗಳಲ್ಲಿ ಹಂದಿ ಸಾಕಣೆ ಪದ್ದತಿಗಳು ನವೀನಗೊಂಡು ಅಭಿವೃದ್ದಿ ಹೊಂದಿದೆ. ಉತ್ತಮ ತಳಿಯ ಹಂದಿಗಳಿಗೆ ಅಲ್ಲಿ ಭಾರೀ ಬೇಡಿಕೆ ಇದೆ. ನಮ್ಮ ದೇಶದಲ್ಲಿ ಹಂದಿ ಸಾಕಣೆ ಇನ್ನೂ ಶೈಶವಾವಸ್ಥೆಯಲ್ಲಿಯೇ ಇದೆ. ಹಳೆಯ ಪದ್ದತಿಯ ಸಾಕಣೆಯೇ ಮುಂದುವರೆದಿದ್ದು, ಮಾಂಸಕ್ಕಾಗಿ ಹಂದಿ ಸಾಕಣೆಯನ್ನು ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳುವುದು ತೀರಾ ಅವಶ್ಯಕವಾಗಿದೆ. ಇಲ್ಲಿ ಹೆಚ್ಚಾಗಿ ಹಂದಿ ಸಾಕುವರು ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರ ಕಸುಬಾಗಿರುತ್ತದೆ. ನಮ್ಮ ರಾಜ್ಯ ಕರ್ನಾಟಕದಲ್ಲಿ ಕೂಡಾ ಹಂದಿ ಸಾಕಣೆ ಅಭಿವೃದ್ದಿ ಇತ್ತೀಚಿನ ಗಮನಾರ್ಹವಾಗಿದ್ದು ಹೆಚ್ಚು ರೈತರು ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಹಂದಿಗಳಿಂದ ಉಪಯೋಗಗಳು

  1. ಹಂದಿ ಮಾಂಸ ಶಾಖಾಹಾರಿಗಳಿಗೆ ಒಂದು ಉತ್ತಮ ಆಹಾರ ಪದಾರ್ಥ, ಕಡಿಮೆ ಬೆಲೆಯಲ್ಲಿ ದೊರೆಯುವುದು ಹಂದಿಯ ದೇಹದ ಹೆಚ್ಚಿನ ಭಾಗ ತಿನ್ನಲು ಅರ್ಹವಾಗಿದೆ. ಹಂದಿ ಮಾಂಸದಲ್ಲಿ ಹೆಚ್ಚು ಕೊಬ್ಬಿನ ಅಂಶವಿದ್ದು ನೀರಿನ ಅಂಶ ಕಡಿಮೆ, ತಿಂದವರಿಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ.
  2. ಶೇಕಡಾ ಮಾಂಸ ಒದಗಿಸುವಿಕೆ ಹಂದಿ ಜಾತಿಯಲ್ಲಿ ಸುಮಾರು ಶೇಕಡಾ 70 ರಷ್ಟು ಇರುತ್ತದೆ. ಮತ್ತು ಈ ಮಟ್ಟ ಬೇರೆ ಜಾನುವಾರು ಜಾತಿಗಳಿಗೆ ಹೋಲಿಸಿದಲ್ಲಿ ಅಧಿಕವಾಗಿರುತ್ತದೆ. ಇದನ್ನು ಲಾಭಗಳಿಕೆಯ ಕೋನದಲ್ಲಿ ಹೇಳುವುದಾದಲ್ಲಿ 100 ಕೆ.ಜಿ. ಜೀವಂತ ಹಂದಿಯ ಮಾಂಸ ಒದಗಿಸುವ ಸಾಮಥ್ರ್ಯ 140 ಕೆ.ಜಿ. ಜೀವಂತ ಕುರಿ ಅಥವಾ ಮೇಕೆ (ಆಡು) ಗೆ ಸಮವಾಗಿರುತ್ತದೆ.
  3. ಹಂದಿಯ ಕೂದಲಿನಿಂದ ಉತ್ತಮ ಬ್ರಷ್‍ಗಳನ್ನು ತಯಾರಿಸಬಹುದಾಗಿದೆ.
  4. ಮೂಳೆಗಳಿಂದ ಕೃತಕ ಗೊಬ್ಬರವನ್ನು ತಯಾರಿಸುತ್ತಾರೆ.
  5. ಹಂದಿ ಗೊಬ್ಬರ ವ್ಯವಸಾಯಕ್ಕೆ ಉತ್ತಮ ಗೊಬ್ಬರವಾಗಿದೆ.
  6. ಹಂದಿಯ ಗ್ರಂಥಿಗಳಿಂದ ಕೆಲವು ಔಷಧಗಳನ್ನು ತಯಾರಿಸುತ್ತಾರೆ.
  7. ಹಂದಿಯ ಕೊಬ್ಬಿನಿಂದ ಔಷಧಿ ಮಿಶ್ರಣ, ಮೇಣದ ಬತ್ತಿ ತಯಾರಿಕೆಗೆ ಉಪಯೋಗಿಸುತ್ತಾರೆ.
ಹಂದಿಗಳಿಗೆ ಮನೆ (ಗೂಡು)
ಹಂದಿಗಳನ್ನು ಮಳೆ, ಗಾಳಿ ಮತ್ತು ನೇರ ಸೂರ್ಯಕಿರಣಗಳಿಂದ ರಕ್ಷಣೆ ಮಾಡಲು ಅವುಗಳಿಗೆ ವಸತಿ ವ್ಯವಸ್ಥೆ ಮಾಡಬೇಕಾಗುತ್ತದೆ. ಕಟ್ಟಡ ನಿರ್ಮಿಸುವಾಗ ಗಮನಿಸಬೇಕಾದ ಅಂಶಗಳೆಂದರೆ ಮನುಷ್ಯನು ವಾಸಿಸುವ ಮನೆಯಿಂದ ಕನಿಷ್ಟ 15 ಮೀಟರ್ ಅಂತರದಲ್ಲಿ ಇರಬೇಕು, ಮನೆಯನ್ನು ಎತ್ತರವಾದ, ಸಮತಟ್ಟಾದ ಸ್ಥಳದಲ್ಲಿ ನಿರ್ಮಿಸಬೇಕು. ಮನೆಯ ಉದ್ದನೆಯ ಭಾಗ ಪೂರ್ವ-ಪಶ್ಚಿಮ ದಿಕ್ಕಿನಲ್ಲಿದ್ದು, ಒಳಗಡೆ ಸರಾಗವಾಗಿ ಗಾಳಿ ಮತ್ತು ಬೆಳಕು ಬರುವಂತಿರಬೇಕು. ಸ್ಥಳೀಯವಾಗಿ ಕಡಿಮೆ ಖರ್ಚಿನಲ್ಲಿ ಲಭ್ಯವಾಗುವ ಕಲ್ಲು ಚಪ್ಪಡಿ ನೆಲಕ್ಕೆ ಉಪಯೋಗಿಸಬಹುದು. ಪ್ರತಿಯೊಂದು ಹಂದಿಗೆ ನಿಲ್ಲಲು, ಮಲಗಲು ಸಾಕಷ್ಟು ಸ್ಥಳಾವಕಾಶ ಸಿಗಬೇಕು. ಸ್ವಚ್ಚ ಕುಡಿಯುವ ನೀರು ಹಾಗೂ ವಿದ್ಯುಚ್ಚಕ್ತಿಯ ಲಭ್ಯತೆಯಿರಬೇಕು. ಆಹಾರ ಸೇವಿಸುವ ಮತ್ತು ನೀರು ಕುಡಿಯುವ ಸ್ಥಳ ಪ್ರತ್ಯೇಕವಾಗಿರಬೇಕು. ವಿವಿಧ ಹಂತಗಳಲ್ಲಿರುವ ಹಂದಿಗಳಿಗೆ ಪ್ರತ್ಯೇಕವಾಗಿ ವಿಂಗಡಿಸಲು ವಿಭಾಗಗಳಿರಬೇಕು. ನೆಲ ಹಾಸಿಗೆಯನ್ನು ಯಾವಾಗಲೂ ಸ್ವಚ್ಚವಾಗಿ ಮತ್ತು ಒಣದಾಗಿ ಇಡಬೇಕು. ಬೀಜದ ಹಂದಿ ಮನೆ, ಬರಡು ಹಂದಿ ಮನೆಯಿಂದ ದೂರವಿರಬೇಕು. ಸಣ್ಣ ಹಂದಿ ಮರಿಗಳು ತಾಯಿಯ ಕೆಚ್ಚಲಿನಿಂದ ಹಾಲು ಕುಡಿಯುವಾಗ, ತಾಯಿಯಿಂದ ತುಳಿತಕ್ಕೆ ಒಳಗಾಗದಂತೆ 1 ಅಥವಾ 2 ಸಾಲಿನ ವಿಭಾಗಗಳು ಭೂಮಿಯಿಂದ 2.5 ಸೆ.ಮಿ. ಎತ್ತರದಲ್ಲಿ ರೇಲಗಾರ್ಡ್ ಹಾಕಬೇಕು. ಹಂದಿಗಳ ಮನೆಯಲ್ಲಿ ಸ್ವಚ್ಚತೆ ಮತ್ತು ಸುಚಿತ್ವ ಕಾಪಾಡಲು ನೆಲ ಹಾಸಿಗೆ ತೊಳೆದ ನಂತರ ನೀರು ಹಾದು ಹೋಗಲು ಹಿಂದುಗಡೆ ಕಾಲುವೆ ನಿರ್ಮಿಸಬೇಕು. ಬೀಜದ ಹಂದಿಗಳನ್ನು ಒಂದು ಕೊಠಡಿಯಲ್ಲಿ ಒಂದನ್ನು ಮಾತ್ರ ಇಡಬೇಕು. ಬೆಳೆಯುತ್ತಿರುವ ಮತ್ತು ಗರ್ಭಧರಿಸಿಲ್ಲದ ಹಂದಿಗಳನ್ನು ಪ್ರತಿ ಒಂದು ಕೊಠಡಿಯಲ್ಲಿ 3 ರಿಂದ 10 ಮಾತ್ರ ಇಡಬೇಕು. 8 ವಾರದಿಂದ 6 ತಿಂಗಳ ವಯಸ್ಸಿನ ಹಂದಿಗಳನ್ನು ಒಂದು ಕೊಠಡಿಯಲ್ಲಿ 5-10 ಹಂದಿಗಳು ಇಡಬಹುದು. ಇದು ಕೊಠಡಿಯ ವಿಸ್ತೀರ್ಣಕ್ಕೆ ಅನುಗುಣವಾಗಿರಬೇಕು.

ಅಡುಗೆ ಮನೆಯ ತ್ಯಾಜ್ಯ ಪದಾರ್ಥಗಳು ಮತ್ತು ಕೃಷಿ ಉಪಉತ್ಪನ್ನಗಳನ್ನು ಸೇವಿಸುವ ಮೂಲಕ ಅತ್ಯುತ್ತಮ ಗುಣಮಟ್ಟದ ಮಾಂಸವನ್ನು ಉತ್ಪಾದಿಸುತ್ತದೆ

ಹಂದಿಗಳ ಸಂತತಿ
ಸಂತಾನಕ್ಕಗಿ ಆರಿಸುವ ಹಂದಿ ತಾನು ಈಯುವ ಮರಿಗಳನ್ನು ಸಾಕುವ ಸಾಮಥ್ರ್ಯ ಹೊಂದಿರಬೇಕು. ಹಾಲು ಉಣಿಸಲು ವಿಶಾಲವಾದ ಕೆಚ್ಚಲಿರಬೇಕು. ಹೆಣ್ಣು ಹಂದಿ 6 ತಿಂಗಳ ವಯಸ್ಸಿಗೆ ಬೆದೆ ಬಂದರೂ ಅದನ್ನು ಒಂದು ವರ್ಷವಾದಾಗ ಮಾತ್ರ ಸಂತತಿಗಾಗಿ ಬಿಡಬೇಕು. ಬೆದೆ ಕಾಲ 2-3 ದಿನಗಳಿರುತ್ತದೆ. ಬೆದೆಯ ಎರಡನೇ ದಿನ ಗಂಡು ಹಂದಿ ಜೊತೆ ಬಿಡಬೇಕು. ಹಂದಿಯ ಗರ್ಭದ ಅವಧಿ ಮೂರುವರೆ ತಿಂಗಳು. ಹಂದಿ ಮರಿಗಳು 2-21/2 ತಿಂಗಳು ತಾಯಿ ಹಾಲನ್ನು ಕುಡಿಯುತ್ತವೆ. ಸಂತಾನೋತ್ಪತ್ತಿ ಸಂಧರ್ಭದಲ್ಲಿ ಗಂಡು ಹಂದಿಯನ್ನು ಒಂದು ಹೆಣ್ಣು ಹಂದಿಯೊಡನೆ ಮಾತ್ರ ಬಿಡಬೇಕು. ಮರಿಗಳನ್ನು 6 ತಿಂಗಳವರೆಗೆ ಸಾಕಿದ ಮೇಲೆ ಮಾರಬಹುದು.
ಗರ್ಭಧರಿಸಿದ ಹಂದಿಯ ಪಾಲನೆ
ಹಂದಿಗೆ ಗರ್ಭ ಕಟ್ಟಿಸಿದ ದಿನಾಂಕ ಬರೆದಿಡುವುದರಿಂದ ಮರಿ ಹಾಕುವ ದಿನಾಂಕ ಕಂಡುಕೊಳ್ಳಲು ಸುಲಭವಾಗುತ್ತದೆ. ಹಂದಿಗಳ ಸರಾಸರಿ ಗರ್ಭಾವಸ್ಥೆಯ ಅವಧಿ 112 ರಿಂದ 116 ದಿವಸಗಳು. ಗರ್ಭಧರಿಸಿದ ಹಂದಿಗಳನ್ನು ಕಂದ (ಗರ್ಭಪಾತ) ಹಾಕಿದ ಹಂದಿಗಳೊಂದಿಗೆ ಬೆರೆಸಬಾರದು. ಅವುಗಳಿಗೆ ಗಾಬರಿ ಪಡಿಸಬಾರದು, ಹೊಡೆಯಬಾರದು, ಒಂದು ಹಂದಿ ಇನ್ನೊಂದರೊಂದಿಗೆ ಜಗಳ ಆಡುವುದಕ್ಕೆ ಅವಕಾಶ ಕೊಡಬಾರದು. ಗರ್ಭಧರಿಸಿದ ಹಂದಿಗಳಿಗೆ ಮರಿಹಾಕುವ 2-3 ವಾರಗಳ ಮೊದಲು ಜಂತುನಾಶಕ ಔಷಧಿ ಕುಡಿಸಬೇಕು. ದೇಹ, ಕೆಚ್ಚಲು ಮತ್ತು ಕೊಳ್ಳಗಳ (ಸಂದಿಗಳ) ಮಧ್ಯೆ ಸೇರಿಕೊಂಡಿರುವ ಹೊಲಸನ್ನು ಸಾಬೂನಿನ ನೀರಿನಿಂದ ತೊಳೆದು ಮರಿ ಹಾಕುವ ಮನೆಗೆ 10 ದಿನ ಮೊದಲು ಸೇರಿಸಬೇಕು. ಹಂದಿಯ ಜಾಸ್ತಿ ಬೆಳೆದ ಗೊರಸು ಕತ್ತರಿಸಬೇಕು. ಇದರಿಂದ ಮರಿಗಳು ತಾಯಿಯ ತುಳಿತಕ್ಕೊಳಗಾದಾಗ ಹೆಚ್ಚು ಗಾಯವಾಗುವುದಿಲ್ಲ. ಮರಿ ಹಾಕುವ ಹಂದಿಗೆ ಸುಲಭವಾಗುವುದಕ್ಕೆ ಗೋಡೆಯಿಂದ ಅರ್ಧ ಅಡಿ ಜಾಗ ಬಿಟ್ಟು ಕಬ್ಬಿಣದ ಪೈಪಿನ (ಫೆರೋಯಿಂಗ ಕ್ರೇಟ್) ರಕ್ಷಣಾ ಕಂಬಿಗಳನ್ನು ಹೇರ್ ಪಿನ್ ಮಾದರಿಯಲ್ಲಿ ಬಗ್ಗಿಸಿ ಭೂಮಿಯಲ್ಲಿ 15 ರಿಂದ 20 ಸೆ.ಮಿ. ಆಳವಾಗಿ ಹೂಳಬೇಕು. ಇದರಿಂದ ಹಂದಿ ಮರಿಗಳು ತಾಯಿ ತುಳಿತಕ್ಕೆ ಸಿಕ್ಕಿ ಒದ್ದಾಡುವುದನ್ನು ತಪ್ಪಿಸಬಹುದು. ಮರಿ ಹಾಕುವ ಹಂದಿ ಮನೆ ನಿರ್ಜಂತುಗೊಳಿಸಲು ಶೇಕಡಾ 2 ರ ಫಿನಾಲ ದ್ರಾವಣ ಸಿಂಪರಣೆ ಮಾಡಿ, ಒಂದು ವಾರದ ಕಾಲ ಖಾಲಿ ಬಿಡಬೇಕು. ಮರಿ ಹಾಕುವ ಲಕ್ಷಣಗಳಾದ ಮೊಲೆತೊಟ್ಟಿನಲ್ಲಿ ಹಾಲು ಶೇಕರಣೆಗೊಂಡಿದ್ದು ಕಾಣಿಸಿಕೊಂಡಾಗ ದಿನದ 24 ಗಂಟೆಗಳ ಕಾಲ ಮರಿ ಹಾಕುವ ಕಾರ್ಯದ ಮೇಲೆ ನಿಗಾವಹಿಸಿ. ಅಶಕ್ತ ಮರಿಗಳಿಗೆ ತಾಯಿಯಿಂದ ಹಾಲು ಕುಡಿಯಲು ಸಹಾಯ ಮಾಡಬೇಕು. ಉಗುರು ಬೆಚ್ಚನೆಯ ನೀರಿನಿಂದ ಮರಿಹಾಕಿದ ಹಂದಿಯನ್ನು ಸ್ವಚ್ಚಗೊಳಿಸಬೇಕು. ಮಾಸಚೀಲ, ಸತ್ತ ಮರಿ, ಹೊಲಸಾಗಿರುವ ಮೇವಿನ ಹಾಸಿಗೆ ತೆಗೆದು ಭೂಮಿಯಲ್ಲಿ ಹೂಳಬೇಕು. ಮರಿ ಹಾಕಿದ ಹಂದಿಗೆ ನಿಗದಿ ಪಡಿಸಿದ ಪೂರ್ಣ ಪ್ರಮಾಣದ ದಾಣಿ ಮಿಶ್ರಣ ಮೊದಲನೇ ಒಂದು ವಾರದಲ್ಲಿ ಕೊಡಬಾರದು. ಹಂತ ಹಂತವಾಗಿ ದಾಣಿ ಮಿಶ್ರಣ ಪ್ರಮಾಣವನ್ನು ಹೆಚ್ಚಿಸಬೇಕು. ಇದರಿಂದ ಮರಿಗಳಲ್ಲಿ ಬೇಧಿ ಪ್ರಮಾಣ ತಗ್ಗಿಸಬಹುದು. ಹಂದಿಗಳು ಮರಿ ಹಾಕುವ ಮನೆಯಲ್ಲಿ ಹುಲ್ಲಿನ ಹಾಸನ್ನು ಒದಗಿಸಬೇಕು.

ಹಂದಿ ಮರಿಗಳ ಪಾಲನೆ
ಹಂದಿ ಮರಿಗಳು ಹುಟ್ಟಿದ ಕೂಡಲೆ ಅದರ ಮೂಗು, ಬಾಯಿ, ಕಣ್ಣು ಮತ್ತು ಕಿವಿಗಳಿಂದ ಪೆÇರೆ ಲೊಳೆಯನ್ನು ತೆಗೆದು ಬಟ್ಟೆ ಅಥವಾ ಗೋಣಿಚೀಲದಿಂದ ಮೈಯನ್ನು ಒರಸಿ ಒಣಗಿಸಬೇಕು. ಹೊಕ್ಕಳ ಹುರಿಯನ್ನು ದೇಹದಿಂದ 3 ಸೆ.ಮಿ. ಬಿಟ್ಟು ತುಕ್ಕು ರಹಿತ ಹರಿತವಾದ ಉಪಕರಣದಿಂದ ಕತ್ತರಿಸಬೇಕು. ನಂತರ ಆ ಸ್ಥಳಕ್ಕೆ ಟಿಂಕ್ಚರ್ ಆಯೋಡಿನ್ ದ್ರಾವಣವನ್ನು ಲೇಪಿಸಿ, ದಾರದಿಂದ ಕಟ್ಟಬೇಕು. ಮರಿಗಳಿಗೆ ಚಳಿಯಿಂದ ರಕ್ಷಣೆ ನೀಡಲು ಒಂದು ವಿದ್ಯುತ್ ದೀಪದ ಉಷ್ಣತೆ ನೀಡಲು ವ್ಯವಸ್ಥೆ ಮಾಡಬೇಕು. ಹುಟ್ಟಿದ ಮರಿಗಳಿಗೆ ಸಾಧ್ಯವಾದಷ್ಟು ಬೇಗನೆ ಗಿಣ್ಣ ಹಾಲು ಕುಡಿಸುವುದರಿಂದ ರೋಗ ನಿರೋಧಕ ಶಕ್ತಿ ನೀಡಲು ಸಹಾಯವಾಗುತ್ತದೆ. ಗಿಣ್ಣದ ಹಾಲು ಲಭ್ಯವಿಲ್ಲದಾಗ ಬದಲಿ ಗಿಣ್ಣದ ಹಾಲು ತಯಾರಿಸಲು ಒಂದು ಮೊಟ್ಟೆಯ ಹಳದಿಯಿರುವ ಭಾಗ ಹಾಗೂ ಆಕಳ ಹಾಲು 1 ಕಿ.ಗ್ರಾಂ ಕಾಯಿಸಿ ಆರಿಸಿದ ಹಾಲಿನಲ್ಲಿ ಮಿಶ್ರಣ ಮಾಡಿ ಕುಡಿಸುವುದು. ಮರಿ ಹಂದಿಗಳನ್ನು ಗುರುತಿಸಲು ಕಿವಿಯ ವಿವಿಧ ಸ್ಥಳಗಳಲ್ಲಿ ಕತ್ತರಿಸಿ ಸಂಖ್ಯೆಗಳನ್ನು ನೀಡುವುದು. ಹಂದಿ ಮರಿ ಹುಟ್ಟಿದಾಗ 4 ಜೊತೆ ಸೂಜಿ ಹಲ್ಲು ಇರುತ್ತವೆ. ಸೂಜಿ ಹಲ್ಲುಗಳು ತಾಯಿ ಕೆಚ್ಚಲು ಮತ್ತು ಮೊಲೆ ತೊಟ್ಟಿಗೆ ಗಾಯಗೊಳಿಸುವುದರಿಂದ ಇವುಗಳನ್ನು ಹುಟ್ಟಿದ ಮೊದಲನೆ ವಾರದಲ್ಲಿ ವಸಡಿಗೆ ಗಾಯ ಆಗದಂತೆ ಕತ್ತರಿಸಿ ತೆಗೆಯಬೇಕು.
ಹಂದಿಯ ಪಾಲನೆ
ಪ್ರತಿದಿನ ನಿಗದಿತ ಸಮಯದಲ್ಲಿ ಆಹಾರ ಒದಗಿಸಬೇಕು. ಗೊದಲಿಯಲ್ಲಿ ಉಳಿದ ಆಹಾರ ತೆಗೆದು, ಗೊದಲಿ ಸ್ವಚ್ಚಪಡಿಸಿ ನಂತರ ತಾಜ ಆಹಾರ ಕೊಡಬೇಕು. ಆಹಾರ ಸೇವನೆ ಮಾಡುವಾಗ ಎಲ್ಲ ಹಂದಿಗಳ ನಿಗಾ ಇಡಬೇಕು. ಅಸ್ವಸ್ಥ ಹಂದಿಗಳನ್ನು ಹಿಂಡಿನಿಂದ ಬೇರ್ಪಡಿಸಬೇಕು. ಗಂಡು : ಹೆಣ್ಣುಗಳ ಅನುಪಾತ 1:10 ಇರಬೇಕು. ಗಂಡು ಹಂದಿಗೆ ಸಂವರ್ಧನೆ (ಃಡಿeeಜiಟಿg) ಗೆ ಮೊದಲು ಆಹಾರ ಕೊಡಬಾರದು. ನಿಯಮಿತ ವ್ಯಾಯಾಮದಿಂದ ಹಂದಿಗಳು ಚುರುಕಾಗಿರುತ್ತವೆ. ಸಲಗವನ್ನು ವಾರದಲ್ಲಿ ಎರಡು ಸಲ ಮಾತ್ರ ಸಂಕೀರ್ಣ ಕ್ರಿಯೆಗೆ ಬಳಸಬೇಕು. ದೇಹದ ತೂಕ ಸಮವಾಗಿ ಇರುವ ಹಂದಿಗಳನ್ನು ಗುಂಪಾಗಿ ವಿಂಗಡಿಸಬೇಕು. ಬೀಜದ ಹಂದಿ ಜೊತೆ ಗರ್ಭಧರಿಸಿದ ಹಂದಿಗಳನ್ನು ಇಡಬಾರದು. ಮರಿ ಹಾಕುವ 4 ರಿಂದ 6 ದಿವಸಗಳ ಮೊದಲು ಹಂದಿಯನ್ನು ಪ್ರತ್ಯೇಕವಾದ ಕೊಠಡಿಗೆ ಬದಲಾಯಿಸಬೇಕು. ಹಂದಿ ಮರಿ ಹುಟ್ಟಿದ 4 ನೇ ವಾರಗಳ ನಂತರ 3 ತಿಂಗಳಿಗೊಮ್ಮೆ ಜಂತು ಹುಳುಗಳ ನಾಶ ಮಾಡುವ ಔಷಧ ಕುಡಿಸಬೇಕು. ಕಬ್ಬಿಣದ ಸಲ್ಫೇಟ್ ದ್ರಾವಣವನ್ನು ಕಾಕಂಬಿಯೊಂದಿಗೆ ಅಥವ ಬೆಲ್ಲದ ನೀರಿನೊಂದಿಗೆ ಬೆರೆಸಿ ಹಂದಿಯ ಮೊಲೆಗಳಿಗೆ ಲೇಪನ ಮಾಡಿ ಮರಿಗಳನ್ನು ಹಾಲು ಕುಡಿಯಲು ಬಿಡುವುದರಿಂದ ರಕ್ತಹೀನತೆಯಿಂದ ಸಾಯುವ ಮರಿಗಳ ಪ್ರಮಾಣ ಕಡಿಮೆ ಮಾಡಬಹುದು. ನಿಗದಿತ ವೇಳೆಯಲ್ಲಿ ಕ್ರಿಮಿನಾಶಕ ಸಿಂಪರಣೆಯಿಂದ ಪರೋಪಜೀವಿಗಳನ್ನು ನಿಯಂತ್ರಿಸಬಹುದು.

ಹಂದಿ ಆಹಾರ
ಹಂದಿಯ ಸಾಕಣೆಯಲ್ಲಿ ತಗಲುವ ಒಟ್ಟು ವೆಚ್ಚದಲ್ಲಿ ಶೇಕಡಾ 70 ರಿಂದ 80 ಭಾಗ ಆಹಾರಕ್ಕಾಗಿ ಖರ್ಚಾಗುತ್ತದೆ. ಹಂದಿ ಸಾಕಣೆಯಲ್ಲಿ ತೊಡಗುವವರು ಆಹಾರದ ವೆಚ್ಚವನ್ನು ಕಡಿಮೆ ಮಾಡಿ ಹೆಚ್ಚು ನಿವ್ವಳ ಲಾಭ ಸಂಪಾದಿಸಲು ಸುಲಭ ದರದಲ್ಲಿ ಸ್ಥಳೀಯವಾಗಿ ದೊರೆಯುವ ಆಹಾರ ಪದಾರ್ಥಗಳನ್ನೇ ಹಂದಿಯ ಆಹಾರವಾಗಿ ಉಪಯೋಗಿಸಬೇಕು. ಹಂದಿಗಳನ್ನು ಸರ್ವಭಕ್ಷಕ ಪ್ರಾಣಿಗಳೆಂದು ಕರೆಯಬಹುದು. ಏಕೆಂದರೆ, ಇವು ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ಆಹಾರ ಪದಾರ್ಥಗಳೆರಡನ್ನೂ ತಿನ್ನುತ್ತವೆ ಆದರೆ ಹಸು, ಎಮ್ಮೆ, ಕುರಿ, ಮೇಕೆಗಳು ತಿನ್ನುವ ಹೆಚ್ಚು ನಾರಿನಂಶವಿರುವ ಆಹಾರವನ್ನು ಹಂದಿಗಳು ತಿಂದು ಜೀರ್ಣಮಾಡಿಕೊಳ್ಳುವ ಶಕ್ತಿ ಹೊಂದಿಲ್ಲ. ಆದ್ದರಿಂದ ಇವು ಕೋಳಿ ಮತ್ತು ಮನುಷ್ಯನು ತಿನ್ನುವ ಆಹಾರವನ್ನೇ ಅವಲಂಬಿಸಿರುತ್ತವೆ. ಹಂದಿಗಳಿಗೆ ಕೊಡುವ ಆಹಾರವನ್ನು ಎರಡು ಭಾಗಗಳಾಗಿ ವರ್ಗೀಕರಿಸಬಹುದು: ಸ್ಥೂಲ ಆಹಾರ ಮತ್ತು ಉತ್ಪಾದನಾ ಆಹಾರ.
ಸ್ಥೂಲ ಆಹಾರ
ಸ್ಥೂಲ ಆಹಾರವು ಶರೀರದ ದೈನಂದಿನ ಚಟುವಟಿಕೆಗಳಿಗೆ ಹಾಗೂ ಜೀವರಸಾಯನ ಕ್ರಿಯೆಗಳಿಗೆ ಅತಿ ಮುಖ್ಯ. ಈ ಆಹಾರದಲ್ಲಿ ಕಂಡುಬರುವ ಮುಖ್ಯ ಸಾಮಾಗ್ರಿಗಳೆಂದರೆ ಕಾಳು ಕಡಿಗಳು, ಕಟಾವಿನ ನಂತರ ಬರುವ ಚಿಗುರು ಮೇವು, ದ್ವಿದಳ ಧಾನ್ಯಗಳನ್ನು ಒಕ್ಕಣೆ ಮಾಡಿದನಂತರ ಉಳಿದ ಹೊಟ್ಟು, ಗೆಡ್ಡೆ-ಗೆಣಸು, ಕತ್ತಾಳೆ ಗೆಡ್ಡೆ, ಕಬ್ಬಿನ ತೊಂಡೆ, ಹುಣಿಸೇ ಬೀಜ, ಅಕ್ಕಿಯ ತೌಡು ಮತ್ತು ಗೋಧಿಯ ತೌಡು ಇತ್ಯಾದಿ.
ಈ ಆಹಾರಗಳಲ್ಲದೆ ಹೋಟೆಲ್, ಹಾಸ್ಟೆಲ್ ಹಾಗೂ ಅಡುಗೆ ಮನೆಯಿಂದ ದೊರೆಯುವ ಅಳಿದುಳಿದ ಆಹಾರ ಪದಾರ್ಥಗಳು, ತರಕಾರಿಗಳು ಹಾಗೂ ಊಟದ ನಂತರ ಉಳಿಯುವ ಆಹಾರ ಮತ್ತು ತರಕಾರಿ ಮಾರುಕಟ್ಟೆಯಿಂದ ಉಳಿಯುವ ಹಸಿರೆಲೆ, ಕಾಯಿ ಪಲ್ಲೆಗಳು, ಹಣ್ಣು ಹಂಪಲುಗಳು ಮತ್ತು ಹಣ್ಣಿನ ರಸದ ಅಂಗಡಿಯಿಂದ ಬರುವ ಅನೇಕ ಹಣ್ಣುಗಳ ಸಿಪ್ಪೆ ಹಾಗೂ ರಸ ತೆಗೆದುಳಿದ ಕಾಂಡ ಪದಾರ್ಥಗಳನ್ನು ಹಂದಿಗಳಿಗೆ ಕೊಡುವುದು ಒಳ್ಳೆಯದು. ಈ ಕ್ರಮ ಅನುಸರಿಸಿದರೆ ಹಂದಿಗಳ ಒಟ್ಟು ಆಹಾರದ ಶೇಕಡಾ 50 ಭಾಗ ಆಹಾರ ಬೇಡಿಕೆಯನ್ನು ಪೂರೈಸಬಹುದು. ಮಿಕ್ಕ ಆಹಾರವನ್ನು ಧಾನ್ಯ ಮಿಶ್ರಣದ ಮೂಲಕ ಕೊಡಬಹುದು. ಈ ಸ್ಥೂಲ ಆಹಾರ ಪದಾರ್ಥಗಳನ್ನು ಹಂದಿಗಳಿಗೆ ತಿನ್ನುವಷ್ಟು ಕೊಡಬೇಕು. ಹೆಚ್ಚಿನ ಉತ್ಪತ್ತಿಗೋಸ್ಕರ ನಿಯೋಜಿತವಾದ ಉತ್ಪಾದನಾ ಆಹಾರವನ್ನು ನಿಗದಿಪಡಿಸಿದ ಪ್ರಮಾಣದಲ್ಲಿ ಕೊಡಬೇಕು.


ಉತ್ಪಾದನಾ ಆಹಾರ
ಇದನ್ನು ಸಮತೋಲನ ಆಹಾರ ಅಥವಾ ಧಾನ್ಯ ಮಿಶ್ರಣವೆಂದೂ ಕರೆಯುತ್ತಾರೆ. ಉತ್ಪಾದನಾ ಆಹಾರದಲ್ಲಿ ನಾರಿನಾಂಶ ಶೇಕಡಾ 6 ಕ್ಕಿಂತ ಕಡಿಮೆ ಇರುತ್ತದೆ. ಸಸಾರಜನಕದ ಅಂಶ ಶೇಕಡಾ 16 ರಿಂದ 22 ಇರುತ್ತದೆ. ಈ ಆಹಾರವು ಹೆಚ್ಚು ಶಕ್ತಿಯುತವಾಗಿ ಹಾಗೂ ರುಚಿಕರವಾಗಿರುತ್ತದೆ. ಈ ಆಹಾರವನ್ನು ತಯಾರಿಸುವಾಗ ನಮ್ಮಲ್ಲಿ ದೊರೆಯುವ ಮೆಕ್ಕೆ ಜೋಳ, ಗೋಧಿ, ಸಜ್ಜೆ, ನವಣಿ, ರಾಗಿ, ಅಕ್ಕಿ ತೌಡು, ಗೋಧಿ ತೌಡು, ದ್ವಿದಳ ಧಾನ್ಯಗಳ ನುಚ್ಚು, ಕಡಲೆಕಾಯಿ ಹಿಂಡಿ, ಸೋಯಾ, ಅಗಸೆ ಹಿಂಡಿ, ಹತ್ತಿಕಾಳು ಹಿಂಡಿ, ಕುದುರೆ ಮಸಾಲೆ ಸೊಪ್ಪಿನ ಇಲ್ಲವೇ ಅಗಸೆ ಸೊಪ್ಪಿನ ಪುಡಿ, ಮೀನಿನ ಪುಡಿ, ಮೂಳೆಯ ಪುಡಿ ಜೀವಸತ್ವಗಳು, ಅಡಿಗೆ ಉಪ್ಪು ಹಾಗೂ ಇನ್ನಿತರ ಬೆಳವಣಿಗೆಯನ್ನು ಪ್ರೇರೇಪಿಸುವ ಮತ್ತು ಬೇಡದ ಸೂಕ್ಷ್ಮಾಣು ಜೀವಿಗಳ ವೃದ್ಧಿಯನ್ನು ತಡೆಗಟ್ಟುವ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಬೇಕು.

• ವಿವಿಧ ರೀತಿಯ ಸಮತೋಲನ ಆಹಾರ ತಯಾರಿಕೆ (ಶೇಕಡಾವಾರು)
ವಿವರ ಮಾದರಿ 1 ಮಾದರಿ 2 ಮಾದರಿ 3
ಅ) ಮುಸುಕಿನ ಜೋಳ 60 50 35
ಆ) ಕಡಲೆಕಾಯಿ ಹಿಂಡಿ 20 20 20
ಇ) ಸೋಯಾ ಹಿಂಡಿ/ಮೀನಿನ ಪುಡಿ 8 5 5
ಈ) ಗೋಧಿ ಬೂಸ 9.5 22.5 37.5
ಉ) ಖನಿಜಾಂಶದ ಪುಡಿ 2.5 2.5 2.5
ಊ) ಜೀವಸತ್ವಗಳು + + +

ಹಂದಿಗೆ ತಗಲುವ ರೋಗಗಳು-ಮುಂಜಾಗ್ರತೆ ಕ್ರಮಗಳು.
ಹಂದಿ ಜಾತಿಯ ತಳಿಗಳು ರೋಗ ರುಜಿನಗಳಿಗೆ ಸಾಮಾನ್ಯವಾಗಿ ಉತ್ತಮ ತಡೆಯುವ ಸಾಮಥ್ರ್ಯವನ್ನು ಹೊಂದಿದ್ದು ಕಡಿಮೆ ಖರ್ಚಿನ ಲಸಿಕೆ ಹಾಗೂ ಔಷಧಿಯಿಂದ ಹೆಚ್ಚು ಉತ್ಪಾದನೆ ಮಾಡಬಲ್ಲವು. ವಿದೇಶಿ ತಳಿಗಳು ಕೂಡ ಅತೀ / ಲಘು ಉಷ್ಣದ ವಾತಾವರಣಗಳಿಗೆ ಹೊಂದಿಕೊಳ್ಳುವ ಸಾಮಥ್ರ್ಯವನ್ನು ಹೊಂದಿವೆ. ಸಾಕು ಹಂದಿಗಳಿಗೆ ರೋಗ ತಗಲದಂತೆ ಅವುಗಳ ಗೂಡನ್ನು ಸ್ವಚ್ಚವಾಗಿಡಬೇಕು. ತಿಂಡಿ, ತಿನಿಸುಗಳು ಸಾಧ್ಯವಾದಷ್ಟು ಶುದ್ದವಿರಬೇಕು. ಮುಖ್ಯವಾಗಿ ಜ್ವರ, ದೊಡ್ಡರೋಗ, ಕಾಲು ಬಾಯಿ ಜ್ವರ ತಗಲುತ್ತವೆ. ಇವೆಲ್ಲವುಗಳಿಗೆ ಲಸಿಕೆ ಹಾಕಿಸಬೇಕು, ಸಿಡುಬು, ಪ್ಲೇಗು ಹಂದಿಯನ್ನು ಬಾದಿಸುತ್ತವೆ. ರೋಗಗ್ರಸ್ತ ಹಂದಿಗಳನ್ನು ಆರೋಗ್ಯವಂತ ಹಂದಿಗಳಿಂದ ಬೇರೆ ಇಡಬೇಕು. ಹಂದಿಯ ಕೋಣೆಯಲ್ಲಿ ಕಜ್ಜಿ, ಹೇನು, ಜಿಗಟೆ, ಉಣ್ಣೆ ಕಂಡಲ್ಲಿ ಹತೋಟಿ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಹಂದಿ ಅಭಿವೃದ್ದಿ ಯೋಜನೆಗಳು ಹಾಗೂ ಉದ್ದೇಶಗಳು
ನಮ್ಮ ದೇಶ ಹಾಗೂ ರಾಜ್ಯದಲ್ಲಿ ಹಂದಿ ಅಭಿವೃದ್ದಿಗಾಗಿ ಯೋಜನೆಗಳನ್ನು ರೂಪಿಸಲಾಗಿದ್ದು. ಹಂದಿ ಸಾಕಲು ಆಶಿಸುವ ರೈತರಿಗೆ ಸರಕಾರಿ ಇಲಾಖೆಯಿಂದ ಉತ್ತಮ ತಳಿಯ ಮರಿಗಳನ್ನು ನಿಗದಿತ ಬೆಲೆಯಲ್ಲಿ ಸರಬರಾಜು ಮಾಡಲಾಗುತ್ತದೆ. ಸಾಕುವವರಿಗೆ ತಾಂತ್ರಿಕ ನೆರವು ಕೂಡ ಕೊಡಲಾಗುತ್ತದೆ. ಬ್ಯಾಂಕುಗಳು ಆರ್ಥಿಕ ಸಹಾಯವನ್ನು ಸಾಲರೂಪದಲ್ಲಿ ನೀಡುತ್ತದೆ.

ಉದ್ದೇಶಗಳು
ರಾಜ್ಯದಲ್ಲಿ ಹಂದಿ ಸಾಕಣೆ ಅಭಿವೃದ್ದಿ ಯೋಜನೆಯ ಮುಖ್ಯ ಉದ್ದೇಶಗಳು

  1. ಖಾಸಗಿಯಾಗಿದ್ದುಕೊಂಡು ಮರಿ ಮಾಡುವವರಿಗೆ ಉತ್ತಮ ನಿರ್ದಿಷ್ಟ ತಳಿಗಳನ್ನು ಒದಗಿಸುವುದು.
  2. ಕಡಿಮೆ ದರಗಳಲ್ಲಿ, ಹಂದಿಗಳನ್ನು ಸಾಕುವ ಉದ್ದೇಶಕ್ಕಾಗಿ ದುರ್ಬಲ ವರ್ಗದವರಿಗೆ ಒದಗಿಸುವುದು.
  3. ನಿರ್ದಿಷ್ಟ ತಳಿಯ ವಿದೇಶಿ ಗಂಡು ಹಂದಿಗಳನ್ನು ಸ್ಥಳೀಯ ತಳಿಗಳೊಂದಿಗೆ ಸಂವರ್ಧನೆಗಾಗಿ ರೈತರಿಗೆ ಒದಗಿಸುವುದು.
  4. ಸಾರ್ವಜನಿಕರಿಗೆ ಶುದ್ದವಾದ ಹಾಗೂ ಸಂಪೂರ್ಣವಾದ ಹಂದಿಯ ಮಾಂಸವನ್ನು ಒದಗಿಸುವುದು.
  5. ತಳಿ ಅಭಿವೃದ್ದಿಯಲ್ಲಿ ಆಸಕ್ತಿಯಿರುವ ರೈತ ಜನರಿಗೆ ಉಚಿತವಗಿ ಶಿಕ್ಷಣ ನೀಡುವುದು.
  6. ಹಂದಿ ಮರಿ ಹಾಕಿಸುವವರಿಗೆ ಅದರಲ್ಲಿ ಖಾಸಗಿ ಜನರಿಗೆ ವಿಸ್ತರಣಾ ಸೇವಾ ಸೌಲಭ್ಯವನ್ನು ನೀಡುವುದು.

ನಮ್ಮ ರಾಜ್ಯದಲ್ಲಿ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಒಳ್ಳೆಯ ವಿದೇಶಿ ತಳಿಗಳನ್ನು ಸಾಕಲಾಗುತ್ತಿದೆ. ಬೆಂಗಳೂರು ಬಳಿಯ ಹೆಸರುಘಟ್ಟ ಹಾಗೂ ಕೊಡಗಿನ ಕೂಡಿಗೆಗಳಲ್ಲಿ ತಳಿ ಸಂವರ್ಧನಾ ಅಥವಾ ಉತ್ಪಾದನಾ ಕೇಂದ್ರಗಳಿರುತ್ತವೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ, ಪಶುವೈದ್ಯಕೀಯ ಕಾಲೇಜಿನಲ್ಲಿ ಹಂದಿ ತಳಿ ಕೇಂದ್ರವಿರುತ್ತದೆ.

ಹಂದಿಗಳ ಮಾರುಕಟ್ಟೆ ಮತ್ತು ಆರ್ಥಿಕತೆ
ಉತ್ತಮವಾದ ಬೆಲೆಯು ಸಿಗುವ ಸಮಯಕ್ಕೆ ಹಂದಿಗಳು ಮಾರುಕಟ್ಟೆಗೆ ಸಿದ್ಧವಾಗುವಂತೆ ಬೆಳೆಸಬೇಕು. ಸರಿಯಾದ ರೀತಿಯಲ್ಲಿ ಆಹಾರ ಕೊಡುವುದರ ಜೊತೆಗೆ ರೋಗಗಳನ್ನು ನಿಯಂತ್ರಿಸುವುದರಿಂದ 6-8 ತಿಂಗಳಲ್ಲಿ ಹಂದಿಗಳು ಮಾರುಕಟ್ಟೆಗೆ ಸಿದ್ಧವಾಗುತ್ತವೆ. ಈ ವೇಳೆಗೆ ಸುಮಾರು 80-90 ಕಿ.ಗ್ರಾಂ ದೈಹಿಕ ತೂಕವನ್ನು ಗಳಿಸಬಲ್ಲವು.
ಮಾರುಕಟ್ಟೆಯಲ್ಲಿ ಹಂದಿಗಳಿಗೆ ಸಿಗುವ ಬೆಲೆಯು ಹಲವಾರು ಅಂಶಗಳನ್ನು ಅವಲಂಬಿಸಿದೆ. ಇವುಗಳಲ್ಲಿ ಹಂದಿಯ ಮಾಂಸದ ಗುಣಮಟ್ಟ , ಬೇಡಿಕೆ ಮತ್ತು ಮಾರುಕಟ್ಟೆಗೆ ಬರುವ ಹಂದಿಗಳ ಸಂಖ್ಯೆ ಮುಖ್ಯವಾದ ಅಂಶಗಳು
ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ಮಾಂಸವನ್ನು ಉತ್ಪಾದಿಸಬೇಕಾಗುತ್ತದೆ. ಅಂದರೆ ಹಿಂದಿನ ದಿನಗಳಲ್ಲಿ ಹೆಚ್ಚು ಕೊಬ್ಬು ಇರುವ ಮಾಂಸವನ್ನು ಬಯಸುತ್ತಿದ್ದ ಜನರು ಈಗ ಕಡಿಮೆ ಕೊಬ್ಬು ಇರುವಂತಹ ಮಾಂಸವನ್ನು ಇಷ್ಟಪಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಉತ್ಪಾದಕರು ಮಾಂಸದ ಗುಣಮಟ್ಟವನ್ನು ನಿಯಂತ್ರಿಸುವುದು ಮುಖ್ಯ. ಎಳೆಯ ವಯಸ್ಸಿನ ಹಂದಿಗಳಲ್ಲಿ ಕೊಬ್ಬಿನ ಅಂಶ ಕಡಿಮೆ ಇರುತ್ತದೆ. ಮತ್ತು ವಯಸ್ಸಾದಂತೆ ಕೊಬ್ಬು ಶೇಖರಣೆ ಪ್ರಾರಂಭವಾಗುತ್ತದೆ. ಆದ್ದರಿಂದ ಸುಮಾರು 80-90 ಕಿ.ಗ್ರಾಂ ದೈಹಿಕ ತೂಕವಿರುವ ಹಂದಿಗಳು ಇಂದಿನ ಬೇಡಿಕೆಗೆ ತಕ್ಕ ಮಾಂಸವನ್ನು ಪೂರೈಸಬಲ್ಲವು. ಇದಲ್ಲದೆ ಹಂದಿಗಳಿಗೆ ವಯಸ್ಸಾದಂತೆ ಪ್ರತಿ ಕಿ.ಗ್ರಾಂ ಮಾಂಸದ ಉತ್ಪಾದನೆಗೆ ಬೇಕಾಗುವ ಆಹಾರದ ಪ್ರಮಾಣವೂ ಜಾಸ್ತಿಯಾಗುತ್ತದೆ. ಆದ್ದರಿಂದ ಹಂದಿಗಳನ್ನು 6-8 ತಿಂಗಳ ವಯಸ್ಸಿನಲ್ಲಿ ಮಾರುವುದರಿಮದ ಬೇಡಿಕೆಗೆ ತಕ್ಕ ಮಾಂಸವನ್ನು ಪೂರೈಸಬಹುದಲ್ಲದೆ ಹೆಚ್ಚು ಲಾಭವನ್ನು ಗಳಿಸಬಹುದು


ಮಂಗಳವಾರ, ನವೆಂಬರ್ 10, 2020

ಕೃಷಿ ಮೇಳ 2020

ಸೋಮವಾರ, ನವೆಂಬರ್ 9, 2020

ಕೃಷಿ ತಂತ್ರಜ್ಞಾನ ನಿರ್ವಹಣೆ ಸಂಸ್ಥೆ (ATMA)ರಾಜ್ಯದೊಳಗಿನ ಅಧ್ಯಯನ ಪ್ರವಾಸ

 ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಭಾವಿಕೆರೆ ತರೀಕೆರೆ ತಾಲೂಕು ಚಿಕ್ಕಮಂಗಳೂರು ಜಿಲ್ಲೆ

 ಮಾಗಡಿ ರೈತರ ಅಧ್ಯಯನ ಪ್ರವಾಸ ದಿನಾಂಕ 6 ನವೆಂಬರ್ 2010 ಶುಕ್ರವಾರ 10:00 ಗಂಟೆಗೆ    ರೈತರು ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಭಾವಿಕೆರೆ ತರೀಕೆರೆ ಚಿಕ್ಕಮಂಗಳೂರು

ಎಲ್ಲಿಗೆ ಭೇಟಿ  ನೀಡಿ ಇಲ್ಲಿನ ಡಾ ಅಶೋಕ್ ರವರು ಸಂಶೋಧನಾ ಕೇಂದ್ರದ ಕಾರ್ಯಕ್ರಮಗಳ ಬಗ್ಗೆ ವಿವರಿಸುತ್ತಾ ಸೋಯಾ ಅವರೇ ಬಗ್ಗೆ ಮಾಹಿತಿ  ನೀಡಿದರು ಬಿತ್ತನೆ ಬೀಜದ ಮಹತ್ವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು ಹಾಗೆ ಅವರು ನಮ್ಮ ಸಂಸ್ಥೆ ವತಿಯಿಂದ  ಉತ್ತಮ ಬೀಜಗಳನ್ನುನು ಹೇಗೆ ಸಂಸ್ಕರಿಸಿ ರೈತರಿಗೆ ಒದಗಿಸುತ್ತಿವೆ ಎಂಬುದರ ಬಗ್ಗೆ ಹೇಳುತ್ತಾ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರದ ಸಹಾಯದಿಂದ ಹೇಗೆ ಬೇರ್ಪಡಿಸುತ್ತೇವೆ  ಎಂಬುದರ ಬಗ್ಗೆ ತಿಳಿಸಿ ಯಂತ್ರವನ್ನು ರೈತರಿಗೆ ತೋರಿಸಿ ಅದರ ಕಾರ್ಯಕ್ಷಮತೆಯನ್ನು ವಿವರಿಸಿದರು  


ನಂತರ ಮೇವಿನ ಬೆಳೆಗಳ ಬಗ್ಗೆ ವಿವರಿಸುತ್ತಾ  ಮೇವಿನ ಬೆಳೆಗಳ ಪ್ರಾತ್ಯಕ್ಷತೆ  ಕಡೆಗೆ ಹೋಗಿ ರೈತರಿಗೆ ತೋರಿಸುತ್ತಾ ಮಾಹಿತಿ ನೀಡಿದರು   

ನಂತರ 

ಸಮಗ್ರ ಕೃಷಿ ಪದ್ಧತಿ

 

ಸಮಗ್ರ ಕೃಷಿ ಎಂದರೇನು ಸಮಗ್ರ ಕೃಷಿಯಲ್ಲಿ ಏನೇನು ಇರಬೇಕು ಎಂಬುದರ ಬಗ್ಗೆ ರೈತರಿಗೆ ಮಾಹಿತಿ ನೀಡಿದರು ಕೃಷಿ ತೋಟಗಾರಿಕೆ ಅರಣ್ಯ ಹೈನುಗಾರಿಕೆ ಮೀನು ಮೊಲ ಕೋಳಿ ಕುರಿ-ಮೇಕೆ ನರ್ಸರಿ ಎರೆಹುಳು ತೊಟ್ಟಿ ಕಾಂಪೋಸ್ಟ್ ತೊಟ್ಟಿ ಇವುಗಳ ಬಗ್ಗೆ ಮಾಹಿತಿ ನೀಡಿ ಅಲ್ಲಿನ ಪ್ರಾತ್ಯಕ್ಷತೆ ಯನ್ನು ತೋರಿಸಿ ವಿವರಿಸಿದರು

  ಸಮಗ್ರ ಕೃಷಿಯಿಂದ ರೈತರಿಗೆ ಹೆಚ್ಚಿನ ಆದಾಯವಿದೆ ಆದ್ದರಿಂದ ಎಲ್ಲ ರೈತರು ಸಮಗ್ರ ಕೃಷಿಯನ್ನು ಅಳವಡಿಸಿ ಒಂದರಲ್ಲಿ ನಷ್ಟ ಆದರೂ ಮತ್ತೊಂದರಲ್ಲಿ ಲಾಭ ಪಡೆಯಬಹುದು ಆದ್ದರಿಂದ ನೀವೆಲ್ಲರೂ ಸಮಗ್ರರ ಕೃಷಿ ಮಾಡಿ ಎಂದು ಹೇಳಿದರು

ರೈತರಿಗೆ ಅವರ ದೂರವಾಣಿ ಸಂಖ್ಯೆ ಯನ್ನು ನೀಡಿ ನಿಮಗೆ ಏನಾದರೂ ಮಾಹಿತಿ ಬೇಕಾದಲ್ಲಿ ಸಂಪರ್ಕಿಸಿ ಎಂದು ದೂರವಾಣಿ ಸಂಖ್ಯೆಯ ನೀಡಿದರು

ಭಾನುವಾರ, ನವೆಂಬರ್ 1, 2020

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು
ನಿನ್ನೆದೆಯ ದನಿಯ ಋಷಿ
ಮನು ನಿನಗೆ ನೀನು ಮನು ನಿನಗೆ ನೀನು 

ನೀರಡಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮ ಶಾಸ್ತ್ರವೆನಗೊರೆಯ ಬೇಕೇನು
ನೊಂದವರ ಕಂಬನಿಯನೊರಸಿ ಸಂತೈಸುವರೆ
ಶಾಸ್ತ್ರ ಪ್ರಮಾಣ ಅದಕಿರಲೇ ಬೇಕೇನು

ಹಿಂದಿನ ಋಷಿಗಳು ಮಾನವರೆ ನಮ್ಮಂತೆ
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ "ಹೃದಯ"ವೇ ನಮಗೆ ಶ್ರೀ ಧರ್ಮ ಸೂತ್ರ 

- ಕು.ವೆಂ.ಪು


ಯೂಟ್ಯೂಬ್ ವಿಡಿಯೋ ಯೂಟ್ಯೂಬ್

ಹಳೆಮತದ ಕೊಳೆಯೆಲ್ಲ ಹೊಸ ಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ

ಹಳೆಮತದ ಕೊಳೆಯೆಲ್ಲ ಹೊಸ ಮತಿಯ ಹೊಳೆಯಲ್ಲಿ 
ಕೊಚ್ಚಿ ಹೋಗಲಿ : ಬರಲಿ ವಿಜ್ಞಾನ ಬುದ್ದಿ. 
ವೇದ ಪ್ರಮಾಣತೆಯ ಮರುಮರೀಚಿಕೆಯಲ್ಲಿ 
ನೀರಡಸಿ ಕೆಡದಿರಲಿ ಸ್ವಾತಂತ್ರ್ಯ ಸಿದ್ಧಿ. 
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ಬಾಳಿ! 

-ಕುವೆಂಪು (’ತರುಣರಿರ, ಎದ್ದೇಳಿ!’೨೮.೧೦.೧೯೩೫, 
ಕೋಗಿಲೆ ಮತ್ತು ಸೋವಿಯಟ್ ರಷ್ಯಾ ೧೯೪೪).

ಅಖಂಡ ಕರ್ಣಾಟಕಅಲ್ತೋ ನಮ್ಮ ಕೂಗಾಟದ ರಾಜಕೀಯ ನಾಟಕ!

ಅಖಂಡ ಕರ್ಣಾಟಕ
ಅಲ್ತೋ ನಮ್ಮ ಕೂಗಾಟದ ರಾಜಕೀಯ  ನಾಟಕ!

ಅಖಂಡ ಕರ್ಣಾಟಕ
ಅಲ್ತೋ ನಮ್ಮ ಕೂಗಾಟದ ರಾಜಕೀಯ  ನಾಟಕ!
 ಹರಸುತಿಹನು ದೇವ ಗಾಂಧಿ;
ಮಂತ್ರಿಸಿಹುದು ಋಷಿಯ ನಾಂದಿ;
ತನಗೆ ತಾನೆ ಋತಸ್ಯಂದಿ
ಅವಂಧ್ಯೆ ಕವಿಯ ಕಲ್ಪನೆ!
 
ಒರ್ವನಾದೊಡೋರ್ವನಲ್ತು 
ಶಕ್ತಿ ಸರ್ವನಲ್ಪನೆ?
ಹಿಂದದೊಂದು ಹಿರಿಯ ಕನಸು
ಇಂದು ಕೋಟಿ ಕೋಟಿ ಮನಸು
ಕೂಡಿ ಮೂಡಿ ನಿಂದ ನನಸು
ತಡೆವುದೇನೋ ನಿನ್ನ ಕಿನಿಸು
ಒಣರುವಲ್ಪ ಜಲ್ಪನೆ?
ಭುವನ ವಂದ್ಯೆ , ಕೇಳ್ , ಅವಂಧ್ಯೆ
ಕವಿಯ ವಿಂಧ್ಯ ಕಲ್ಪನೆ!
 
ಅಖಂಡ ಕರ್ಣಾಟಕ :
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!
 
ಅಖಂಡ ಕರ್ಣಾಟಕ:
ಅಲ್ತೋ  ನಮ್ಮ ನಾಲ್ಕು ದಿನದ  ರಾಜಕೀಯ ನಾಟಕ!
 
ನೃಪತುಂಗನೆ ಚಕ್ರ ವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ !
ರನ್ನ ಜನ್ನ ನಾಗವರ್ಮ
ರಾಘವಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ :
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ !
 
ಅಖಂಡ ಕರ್ಣಾಟಕ :
ಅಲ್ತೊ ನಮ್ಮ ಕೀರ್ತಿಶನಿಯ ರಾಜಕೀಯ ನಾಟಕ !
ಬರಿಯ ಹೊಟ್ಟೆ ಬಟ್ಟೆಗಲ್ತೊ ;
ಪಕ್ಷ ಜಾತಿ ಕಲಹಕಲ್ತೊ ;
ಹಮ್ಮು ಬಿಮ್ಮು ಸೊಮ್ಮಿಗಲ್ತೊ ;
ಬಣ್ಣ ಚಿಟ್ಟೆ ಬಾಳಿಗಲ್ತೊ ;
ಜೋಳವಾಳಿ ಕೂಳಿಗಲ್ತೊ ;
ದರ್ಪ ಸರ್ಪ ಕಾರ್ಕೋಟಕ 
ಸ್ವಾರ್ಥ ಫಣಾ ಕ್ರೀಡೆಗಲ್ತೊ
 
ರಾಜಕೀಯ ಪೇಟಕ
ಅಖಂಡ ಕರ್ಣಾಟಕ!
 
ಅಖಂಡ ಕರ್ಣಾಟಕ :
ಸರಸ್ವತಿಯೆ ರಚಸಿದೊಂದರಾಜಕೀಯ ತ್ರೋಟಕ !
ಮೆರೆಯಲಾತ್ಮ ಸಂಸ್ಕೃತಿ ;
ಬೆಳಗೆ ಜೀವ ದೀಧಿತಿ ;
 
ಪರಮಾತ್ಮನ ಚರಣ ದೀಪ್ತಿ
ಶರಣ ಹೃದಯಗಳಲಿ ಹೊತ್ತಿ
ಉಸಿರುಸಿರಿನ ಹಣತೆ ಬತ್ತಿ
 
ಉರಿಯಲೆಂದು ತಣ್ಣಗೆ ;
ಬಾಳ ಸೊಡರ್ ಗುಡಿಯ ನೆತ್ತಿ
ತನ್ನ ಮುಡಿಯ ಬಾನಿಗೆತ್ತಿ
ಸೊಗಸಲೆಂದು ರಸಸ್ಪೂರ್ತಿ
ಭಗವಂತನ ಕಣ್ಣಿಗೆ ;
 
 
ಹಾಡುತಿಹೆನು ಕಂಡ ನಾನು
ದಿಟ್ಟಿಗೇಡೊ ? ಹುಟ್ಟು ಕುರುಡೋ ?
ಬುದ್ಧಿ ಬರಡೋ ಬೇರೆ ಹುರುಡೊ?
ಮೆಳ್ಳಗಣ್ಣ, ಕಾಣೆ ನೀನು !
ಹೇಳು ! ತಪ್ಪು ನನ್ನದೇನು ?
 
ಕರ್ಣಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ ! ಶಕ್ತಿ ಕಣಾ !
ತಾಯಿ ಕಣಾ ! ದೇವಿ ಕಣಾ !
ಬೆಂಕಿ ಕಣಾ ! ಸಿಡಿಲು ಕಣಾ !
ಕಾವ ಕೊಲುವ ಒಲವ ಬಲವ
ಪಡೆದ ಚಲವ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ !
 
ವಿರೋಧಿಗಾಸ್ಫೋಟಕ,
ಕಂಡ ಕವಿಗಖಂಡ ದೇವಿ ಕಣಾ ಕರ್ಣಾಟಕ!
ಸರಸ್ವತಿಯೆ ರಚಿಸಿದೊಂದರಾಜಕೀಯ ತ್ರೋಟಕ !
ವಿರೋಧಿಗಾಸ್ಫೋಟಕ, 
ಅಖಂಡ ಕರ್ಣಾಟಕ :
ಅಲ್ತೊ ನಾವು ನರ್ತಿಪೊಂದು ರಾಜಕೀಯ ನಾಟಕ
ಅಖಂಡ ಕರ್ಣಾಟಕ !
ಅಖಡಂ ಕರ್ಣಾಟಕ !
ಜಯ್ ಜಯ್ ಜಯ್ ಅಖಂಡ ಕರ್ಣಾಟಕ !
ಕವಿ: ಕುವೆಂಪು

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ 01. ಮರಗಿಡಗಳು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ...